ಬೆಂಗಳೂರು: ಶನಿವಾರ ಸಂಜೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣದೇವ ಕೃಪೆ ತೋರಿದ್ದಾನೆ. ಇನ್ನೂ ಕೆಲವು ಕಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಚಿಕ್ಕಬಳ್ಳಾಪುರ: ಜಿಲ್ಲೆ ಚಿಂತಾಮಣಿಯಲ್ಲಿ ವರುಣನ ಆರ್ಭಟ ಜೋರಾಗಿತ್ತು. ಚಿಂತಾಮಣಿ ನಗರದಲ್ಲಿ ಸಂಜೆಯಿಂದಲೂ ಬಿಟ್ಟು ಬಿಡದೆ ಮಳೆರಾಯ ಅಬ್ಬರಕ್ಕೆ ನಗರದ ಎಲ್ಲಾ ರಸ್ತೆಗಳು ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನಗರದ ಎಂಜಿ ರಸ್ತೆಯ ಮಧ್ಯೆ ಭಾರೀ ಹಳ್ಳವೊಂದು ವಾಹನ ಸವಾರರಿಗೆ ಕಾಣದೆ ನೀರಿನ ಮಧ್ಯೆ ವಾಹನ ಸವಾರರು ಪರದಾಡುವಂತಾಗಿದೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ-ಚಿಂತಾಮಣಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 234 ರ ತಾತ್ಕಾಲಿಕ ರಸ್ತೆ ಭಾರೀ ಮಳೆಗೆ ಕೊಚ್ಚಿ ಹೋಗಿದೆ.
Advertisement
Advertisement
ಇದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಎರಡು ಬದಿಯಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ. ಅಂದ ಹಾಗೆ ನೂತನ ಹೆದ್ದಾರಿ ನಿರ್ಮಾಣ ಸಂಬಂಧ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಾರಣ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಇನ್ನೂ ಚಿಂತಾಮಣಿಯ ಕರಿಯಪ್ಪನಹಳ್ಳಿ ಬಳಿಯ ರೈಲ್ವೆ ಅಂಡರ್ ಪಾಸ್ ನಲ್ಲಿ 3-4 ಅಡಿ ನೀರು ತುಂಬಿಕೊಂಡಿರುವ ಪರಿಣಾಮ ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿತ್ತು. ರೈಲ್ವೆ ಅಂಡರ್ ಪಾಸ್ ನಲ್ಲಿ ಕೆಎಸ್‍ಆರ್‍ಟಿಸಿ ಬಸ್ ಹಾಗೂ ಟಾಟಾ ಏಸ್ ಕೆಟ್ಟು ನಿಂತಿದ್ದವು. ಮಳೆಯಿಲ್ಲದೆ ಕಂಗೆಟ್ಟಿದ್ದ ಚಿಂತಾಮಣಿ ಜನರಿಗೆ ಒಂದೆಡೆ ಸಂತೋಷ ಆದರೆ. ಮತ್ತೊಂದೆಡೆ ಸಂಕಟ ಎದುರಾಗಿದೆ.
Advertisement
Advertisement
ಹಾವೇರಿ: ಜಿಲ್ಲೆಯಲ್ಲಿ ರಾತ್ರಿಯಾಗುತ್ತಿದ್ದಂತೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು, ಬ್ಯಾಡಗಿ, ಹಿರೇಕೆರೂರು ಸೇರಿದಂತೆ ಶಿಗ್ಗಾಂವಿ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗುತ್ತದೆ. ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಹಾವೇರಿ ನಗರದಲ್ಲಿನ ನೀರು ಚರಂಡಿ ತುಂಬಿ ಹೆದ್ದಾರಿಯಲ್ಲಿ ಹರಿಯುತ್ತಿದೆ. ವಾಹನ ಸವಾರರು ನಗರದಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಸಹ ಕೆಲ ಕಾಲ ಸ್ಥಗಿತಗೊಂಡಿತು. ಜಿಲ್ಲೆಯ ಅನ್ನದಾತರು ಹರ್ಷಗೊಂಡಿದ್ದಾರೆ.
ಕೋಲಾರ: ತುಂಬಿ ಹರಿಯುತ್ತಿರುವ ರಾಜಾಕಾಲುವೆಗಳು, ಮೈದುಂಬಿ ಮುಗುಳ್ನಗುತ್ತಿರುವ ಸಣ್ಣ ಸಣ್ಣ ಕೆರೆಗಳು, ದೊಡ್ಡದಾದ ಕೆರೆಯಲ್ಲಿ ಚಿತ್ತಾರ ದಂತೆ ಅಲ್ಲಲ್ಲಿ ನಿಂತಿರುವ ನೀರು, ಇದೆಲ್ಲಾ ಕಂಡು ಬಂದಿದ್ದು ಬರಗಾಲದ ತವರು ಜಿಲ್ಲೆ ಕೋಲಾರ ಜಿಲ್ಲೆಯಲ್ಲಿ. ಹೌದು ಬರಗಾಲದಿಂದ ತತ್ತರಿಸಿ ಹೋಗಿದ್ದ ಕೋಲಾರ ಜಿಲ್ಲೆ ನಿಜಕ್ಕೂ ಇಂಥಾದೊಂದು ಮಳೆಯನ್ನು ಕಂಡು ಕನಿಷ್ಠ 15 ವರ್ಷಗಳೇ ಕಳೆದು ಹೋಗಿತ್ತು. ಸದಾ ಬಿರು ಬಿಸಿಲಿನಿಂದ ಬೇಯುತ್ತಿದ್ದ ಜಿಲ್ಲೆಯಲ್ಲಿ ಮಳೆ ಮರಿಚಿಕೆಯಾಗಿತ್ತು. ಆದರೆ ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧೆಡೆ ಸುರಿಯುತ್ತಿರುವ ಧಾರಾಕಾರ ಮಳೆ ಆ ಜಿಲ್ಲೆಯ ಅದೆಷ್ಟೋ ಬಡಜೀವಗಳ ಬೇಡಿಕೆಯನ್ನು ಈಡೇರಿಸಿದೆ. ಪರಿಣಾಮ ಜಿಲ್ಲೆಯಲ್ಲಿನ ಸಣ್ಣ ಪುಟ್ಟ ಕೆರೆಗಳು ಮತ್ತು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಇದರಿಂದ ಜಿಲ್ಲೆಯ ಜನ ನಿಜಕ್ಕೂ ಪುಲ್ ಖುಷಿಯಾಗಿದ್ದಾರೆ.
ಜಿಲ್ಲಾಡಳಿತ ಹೇಳುವಂತೆ ಜಿಲ್ಲೆಯಲ್ಲಿ ಸುಮಾರು 400 ಕ್ಕೂ ಹೆಚ್ಚು ಸಣ್ಣ ಪುಟ್ಟ ಕೆರೆಗಳು ತುಂಬಿವೆಯಂತೆ. ಶೇಖರಣೆಯಾಗಿರುವ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲಾಗುವುದು ಪಾತಾಳ ಸೇರಿರುವ ಅಂತರ್ಜಲ ಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಈ ವರ್ಷ ಕೋಲಾರ ಜಿಲ್ಲೆಯಲ್ಲಿ ಆರಂಭದಲ್ಲಿ ಮುಂಗಾರು ಮಳೆ ಕೈಕೊಟ್ಟಿತ್ತು. ನಂತರ ಬಂದ ಅಲ್ಪ ಸ್ವಲ್ಪ ಮಳೆಗೆ ಜಿಲ್ಲೆಯ ರೈತರು ರಾಗಿ, ಹುರುಳಿ, ಜೋಳ ಸೇರಿದಂತೆ ಅಲ್ಪಾವದಿ, ದೀರ್ಘಾವಧಿ ದ್ವಿದಳ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗೆ ಸಹಕಾರಿಯಾಗಿದೆ. ಕಳೆದ ಹತ್ತು ಹದಿನೈದು ವರ್ಷಗಳಿಂದ ಕಾಣದ ಇಂಥ ಮಳೆಯನ್ನು ಕಂಡಿರುವ ಜಿಲ್ಲೆಯ ರೈತರು ಪುಲ್ ಖುಷಿಯಾಗಿದ್ದಾರೆ. ಆದರೆ ಜಿಲ್ಲಾಡಳಿತ ಮನಸ್ಸು ಮಾಡಿ ಒತ್ತುವರಿಯಾಗಿರುವ ರಾಜಕಾಲುವೆ ಹಾಗೂ ಕೆರೆಗಳ ಒತ್ತುವರಿ ತೆರವು ಮಾಡಿದರೆ ಬೀಳುವ ಅಲ್ಪ ಸ್ವಲ್ಪ ಮಳೆಯ ನೀರು ಸರಾಗವಾಗಿ ಕೆರೆ ಸೇರುತ್ತದೆ. ಹಾಗಾಗಿ ಕೂಡಲೇ ಜಿಲ್ಲಾಡಳಿತ ಒತ್ತುವರಿ ತೆರವುಗೊಳಿಸಬೇಕು ಅನ್ನೋದು ಜಿಲ್ಲೆಯ ಜನರ ಒತ್ತಾಯಿಸುತ್ತಿದ್ದಾರೆ.
ಚಿತ್ರದುರ್ಗ: ಮಳೆ ಇಲ್ಲದೆ ಕಂಗಲಾಗಿದ್ದ ಬರದ ನಾಡು ಚಿತ್ರದುರ್ಗಕ್ಕೆ ವರುಣ ಕೃಪೆ ತೋರಿದ್ದಾನೆ. ವರುಣನ ಕೃಪೆಗೆ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಜನರು ಅಬ್ಬಬ್ಬಾ ಅನ್ನುವಂತೆ ಮಾಡಿದ್ದಾನೆ. ಹಲವು ವರ್ಷಗಳ ನಂತರ 4 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ರಾತ್ರಿ ಪೂರ್ತಿ ಜಾಗರಣೆ ಮಾಡುವಂತಾಗಿತ್ತು. ಇನ್ನೂ ಮುಂಜಾನೆಯಿಂದ ಮನೆಗೆ ನುಗಿದ ನೀರನ್ನ ಹೊರ ಹಾಕುವ ಕಾಯಕ ಮಾಡಬೇಕಾಯಿತು. ನಗರದ ಸಾಧಿಕ್ ನಗರ, ನೆಹರೂ ನಗರ, ಆಜಾರ್ ನಗರ, ಮಾರುತಿ ನಗರ ಹಾಗೂ ಹೊಸಪೇಟೆ ರಸ್ತೆಗಳು ಜಲಾವೃತಗೊಂಡಿದ್ದವು. ಇನ್ನೂ ಮೇದೆಹಳ್ಳಿಯ ಬಸವರಾಜ್ ಅನ್ನೋರಿಗೆ ಸೇರಿದ ಮನೆ ಕುಸಿದು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ಅಷ್ಟೇ ಅಲ್ಲದೆ ಚಳ್ಳಕೆರೆಯ ಗೋಪನಹಳ್ಳಿಯ ಗ್ರಾಮದಲ್ಲಿ ಸುರಿದ ಧಾರಾಕಾರ ವರ್ಷಧಾರೆಗೆ ದೊಡ್ಡಹಳ್ಳ ತುಂಬಿ ಹರಿಯುತ್ತಿದೆ. ಗ್ರಾಮದ ಮನೆಗಳು, ಅಂಗನವಾಡಿ, ತೋಟ ಹಾಗೂ ಜಮೀನುಗಳಿಗೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಮಳೆ ನೀರಿನಿಂದಾಗಿ ರಾತ್ರಿ ಕೆಲ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ನೆಲಮಂಗಲ: ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ. ಕಳೆದ 1 ಗಂಟೆಯಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಮ್ಯಾನ್ ಹೋಲ್ ಗಳು ಸೇರಿದಂತೆ ರಾಜಕಾಲುವೆಗಳು ತುಂಬಿ ಹರಿಯುತ್ತಿವೆ. ಧಾರಕಾರ ಮಳೆಯಿಂದಾಗಿ ಜನರು ಆತಂಕ ಪಡುವ ಪರಿಸ್ಥಿತಿ ಎದುರಾಗಿದೆ. ಮನೆಗಳಿಗೆ ತೆರಳುವಾಗ ವಾಹನ ಸವಾರರು ಮಳೆಯ ರುದ್ರ ನರ್ತನಕ್ಕೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಬೆಳಗ್ಗೆಯಿಂದ ಮೋಡ ಕವಿದ ವಾತವರಣ ಆವರಿಸಿದ್ದು ಸಂಜೆ ವೇಳೆಗೆ ಆಗಮಿಸಿದ ವರುಣನ ಆರ್ಭಟಕ್ಕೆ ಪಟ್ಟಣದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.