ಮಂಡ್ಯ: ಕೆಆರ್‌ಎಸ್ ನಿಂದ 1 ಲಕ್ಷದ 30 ಸಾವಿರ ಕ್ಯೂಸೆಕ್‍ಗೂ ಭಾರೀ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪರಿಣಾಮ ಐತಿಹಾಸಿ ವೆಲ್ಲೆಸ್ಲಿ ಸೇತುವೆಯನ್ನು ಸ್ಪರ್ಶಿಸಿ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದ್ದು, ಸೇತುವೆ ಮುಳುಗುವ ಭೀತಿಯಲ್ಲಿದೆ.
ಪರಿಣಾಮ ಜಾಗೃತರಾದ ಅಧಿಕಾರಿಗಳು ಹಾಗೂ ಪೊಲೀಸರು ಸೇತುವೆಯ ಎರಡೂ ಬದಿ ಕಾವಲು ನಿಂತು ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಿದ್ದಾರೆ. ಇತ್ತ ರಂಗನತಿಟ್ಟು ಪಕ್ಷಿಧಾಮ ಜಲಾವೃತವಾಗಿ ಪಕ್ಷಿ ಸಂಕುಲಕ್ಕೆ ಆತಂಕ ಎದುರಾಗಿದೆ.
Advertisement
ಕಾವೇರಿ ಜಲಾನಯನದಲ್ಲಿ ಮಳೆ ಆರ್ಭಟಿಸುತ್ತಿದ್ದು, ಕೆಆರ್‌ಎಸ್ ಜಲಾಶಯಕ್ಕೆ ಒಂದು ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ. ಅಪಾಯದ ಮಟ್ಟ ಮೀರುತ್ತಿದ್ದು, ಅನಿವಾರ್ಯವಾಗಿ ಅಧಿಕ ಪ್ರಮಾಣದ ನೀರನ್ನು ಹೊರ ಬಿಡಬೇಕಾಗಿದೆ. ಇದರಿಂದಾಗಿ ಕಾವೇರಿ ನದಿಪಾತ್ರದ ದೇವಾಲಯ, ಜಮೀನು ಜಲಾವೃತವಾಗಿ ಪ್ರವಾಹದ ಭೀತಿ ಎದುರಾಗಿದೆ.
Advertisement
Advertisement
ಪಶ್ಚಿಮವಾಹಿನಿ ಬಳಿ ಶ್ರೀರಾಮ, ಶ್ರೀಕೃಷ್ಣ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಜಲಾವೃತವಾಗಿದೆ. ನಿಮಿಷಾಂಭ ದೇವಾಲಯದ ಮೆಟ್ಟಿಲುಗಳವರೆಗೂ ನೀರು ಆವರಿಸಿಕೊಂಡಿದೆ. ಇತ್ತ ಪ್ರವಾಹ ಮಟ್ಟ ಹೆಚ್ಚಾಗಿದ್ದರಿಂದ ನದಿಗೆ ಇಳಿಯದಂತೆ ಬ್ಯಾರಿಕೇಡ್ ಹಾಕಿ ಪೊಲೀಸ್ ಕಾವಲು ನಿಂತಿದ್ದಾರೆ.
Advertisement
ಕಾವೇರಿ ನದಿ ಪಾತ್ರದ ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಎಡಮುರಿ, ಬಲಮುರಿ, ರಂಗನತಿಟ್ಟು, ಮುತ್ತತ್ತಿ ಸೇರಿದಂತೆ ಹಲವೆಡೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕೆಆರ್‌ಎಸ್ ಜಲಾಶಯ ತುಂಬದೆ ಸತತ ಬರಗಾಲದಿಂದ ಕಂಗೆಟ್ಟ ಮಂಡ್ಯ ಜನ ಇದೀಗ ಕಾವೇರಿ ನದಿ ಹರಿಯುತ್ತಿರುವ ರಭಸಕ್ಕೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪ್ರವಾಹದ ಭೀತಿ ಎದುರಾಗಿದ್ದರಿಂದ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಗೆ ನೀಡಲಾಗಿದೆ. ಸ್ವತಃ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಕಾವೇರಿ ನದಿ ಪಾತ್ರದ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆ ನಡೆಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv