ಮೈಸೂರು/ಮಂಡ್ಯ: ಕೆಆರ್‌ಎಸ್, ಕಬಿನಿ ಹಾಗೂ ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿದ್ದು, ಅನೇಕ ಸೇತುವೆ ಮುಳಗಡೆಯಾಗಿವೆ. ಇತ್ತ ಗದ್ದೆ ಹಾಗೂ ಗ್ರಾಮಗಳಿಗೆ ನೀರು ನುಗ್ಗಿದ್ದು ನದಿ ಪಾತ್ರದ ಗ್ರಾಮಸ್ಥರ ಜೀವನ ಅಸ್ತವ್ಯಸ್ತವಾಗಿದೆ.
ಕೆಆರ್‌ಎಸ್ ಹಾಗೂ ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ನೀರಿನಮಟ್ಟ ಹೆಚ್ಚುತ್ತಿದೆ. ಹೀಗಾಗಿ ಅಧಿಕಾರಿಗಳು ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿಬಿಡುತ್ತಿದ್ದಾರೆ. ಹೀಗಾಗಿ ಟಿ.ನರಸೀಪುರ ತಾಲೂಕಿನ ತಲಕಾಡಿನ ಹೆಮ್ಮಿಗೆ ಸೇತುವೆ ಮುಳುಗಡೆಯಾಗಿದ್ದು ಟಿ.ನರಸೀಪುರ- ತಲಕಾಡು ನಡುವಿನ ರಸ್ತೆ ಸಂಪರ್ಕ ಕಡಿತವಾಗಿದೆ.
Advertisement
Advertisement
ತಲಕಾಡಿನ ಮಾಧವ ಮಂತ್ರಿ ಅಣೆಕಟ್ಟೆ ಮುಂಭಾಗದಲ್ಲಿ ಹೆಮ್ಮಿಗೆ ಸೇತುವೆ ಇದೆ. ಕೆಆರ್‌ಎಸ್ ನಿಂದ ಒಂದೂವರೆ ಲಕ್ಷ, ಕಬಿನಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವುದರಿಂದ ಹೆಮ್ಮಿಗೆ ಸೇತುವೆ ಮುಳುಗಡೆಯಾಗಿದೆ. ಇತ್ತ ಹಾರಂಗಿ ಡ್ಯಾಮ್‍ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, 65 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದೆ. ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾನಯನ ಪ್ರದೇಶದಲ್ಲಿಯೂ ಮಳೆ ಹೆಚ್ಚಾಗುತ್ತಿದ್ದು, ಡ್ಯಾಮ್ ಗೆ 65,600 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಭದ್ರತೆಯ ದೃಷ್ಟಿಯಿಂದ ನಿನ್ನೆಯಿಂದ ನದಿಗೆ ನಾಲ್ಕು ಕ್ರಸ್ಟ್ ಗೇಟ್ ಮತ್ತು ವಿದ್ಯುತ್ ಘಟಕದ ಮೂಲಕ 65 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.
Advertisement
ಭಾರೀ ಪ್ರಮಾಣದ ನೀರನ್ನು ಹೊರಬಿಟ್ಟಿದ್ದರಿಂದ ಹಾರಂಗಿ ನದಿ ಪಾತ್ರದ ತಗ್ಗು ಪ್ರದೇಶ ರೈತರ ಗದ್ದೆಗಳಿಗೆ ನೀರು ನುಗ್ಗಿದೆ. ಹುದಗೂರು ಗ್ರಾಮದ 8 ಜನ ರೈತರ ನಾಟಿ ಮಾಡಿದ್ದ 10 ಎಕರೆಗೂ ಹೆಚ್ಚು ಗದ್ದೆಗಳು ಹಾಗೂ ಕೂಡಿಗೆ ಗಾಮ್ರ ಪಂಚಾಯತ್ ವತಿಯಿಂದ ನಿವೇಶನ ನೀಡಲು ಕಾಯ್ದಿರಿಸಿದ್ದ ತಗ್ಗು ಪ್ರದೇಶವು ನೀರಿನಿಂದ ಜಲಾವೃತಗೊಂಡಿದೆ. ಇಂದು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಕಪ್ಪಡಿಯ ಸಿದ್ದಪ್ಪಾಜಿ ರಾಚಾಪ್ಪಾಜಿ ದೇವಾಲಯಕ್ಕೆ ನೀರು ನುಗ್ಗಿದೆ. ದೇವಾಲಯದ ಆವರಣದ ಸುತ್ತ ಹಾಗೂ ಅಲ್ಲಿರುವ ಮಳಿಗೆಗಳಿಗೆ ನೀರು ನುಗ್ಗಿದೆ. ಹೀಗಾಗಿ ವ್ಯಾಪಾರಿಗಳು, ಭಕ್ತರು ಪರದಾಡುವಂತಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv