– ರಾಜ್ಯದ ಹಲವೆಡೆ ಮಳೆ ಅವಾಂತರ – ಎಲ್ಲೆಲ್ಲಿ ಏನು?
ಚಿಕ್ಕಮಗಳೂರು: ಗಾಳಿ-ಮಳೆ ಅಬ್ಬರಕ್ಕೆ ಬೃಹತ್ ಮರ ಮನೆ ಮೇಲೆ ಉರುಳಿ, ಸಂಪೂರ್ಣ ಜಖಂಗೊಂಡಿರುವುದು ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ನಡೆದಿದೆ.
ಮೋಣಕ್ಕ ಎಂಬುವರ ಮನೆಯ ಮೇಲೆ ಮರ ಉರುಳಿ ಬಿದ್ದಿದ್ದು, ಮನೆಯ ಅರ್ಧ ಭಾಗ ಜಖಂಗೊಂಡಿದೆ. ಮನೆಯಲ್ಲಿದ್ದವರು ಬೇರೆ ರೂಂನಲ್ಲಿ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸಿಬ್ಬಂದಿ ಮನೆ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಂಬಿ ಹರಿಯುತ್ತಿರುವ ತುಂಗಾ
ಕಳೆದ 2-3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡು ಜನರು ಹೈರಾಣಾಗಿದ್ದಾರೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ. ಪರಿಣಾಮ ತುಂಗಾ ನದಿಗೆ ಅಪಾರ ಪ್ರಮಾಣ ನೀರು ಹರಿದು ಬರುತ್ತಿದೆ.ಶೃಂಗೇರಿಯಲ್ಲಿ ಪಾರ್ಕಿಂಗ್ ಸ್ಥಳ ಜಲಾವೃತಗೊಂಡಿದೆ.
ಶೃಂಗೇರಿ ಗಾಂಧಿ ಮೈದಾನದ ಪಾರ್ಕಿಂಗ್ ಲಾಟ್ ಸಹ ಜಲಾವೃತವಾಗಿದೆ. ಕಟ್ಟಡಗಳ ಅಂಡರ್‍ಗ್ರೌಂಡ್‍ಗೂ ನೀರು ನುಗ್ಗಿದೆ. ಶಾರದಾಂಬೆ ದೇಗುಲದ ವಾಹನಗಳ ಪಾರ್ಕಿಂಗ್ ಜಾಗಕ್ಕೂ ಜಲದಿಗ್ಬಂಧನವಾಗಿದೆ. ರಸ್ತೆಯಲ್ಲಿ ಒಂದೂವರೆ-ಎರಡು ಅಡಿ ಎತ್ತರಕ್ಕೆ ನೀರು ಹರಿಯುತ್ತಿದೆ. ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
ಇನ್ನು ಚಿಕ್ಕಮಗಳೂರು ನಗರದ ಎಂಜಿ ರಸ್ತೆಯ ಹಾರ್ಡ್‍ವೇರ್ ಶಾಪ್‍ಗಳಿಗೆ ನೀರು ನುಗ್ಗಿದೆ. ಹಾರ್ಡ್‍ವೇರ್ ಶಾಪ್ ಒಳಗೆ ನದಿಯಂತೆ ನೀರು ನುಗ್ಗಿದೆ. ಅಂಗಡಿ ಕೆಳಮಹಡಿಯಲ್ಲಿರುವ ಕಾರಣ ನೀರು ಏಕಾಎಕಿ ಒಳಹೊಕ್ಕಿದೆ. ಅಂಗಡಿಯಲ್ಲಿದ್ದ ಬಹುತೇಕ ಎಲ್ಲಾ ವಸ್ತುಗಳು ನೀರಿನಲ್ಲಿ ಮುಳುಗಿವೆ.
ಚಿಕ್ಕೋಡಿ – ದೂದ್ ಗಂಗಾ ನದಿ ತೀರದ ಜನರಿಗೆ ಎಚ್ಚರಿಕೆ
ಇನ್ನು ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಮಹಾರಾಷ್ಟ್ರದ ಜಲಾಶಯಗಳು ಭರ್ತಿ ಹಂತ ತಲುಪಿವೆ. ಕೊಲ್ಲಾಪುರ ಜಿಲ್ಲೆಯ ರಾಧಾನಗರ ಜಲಾಶಯ ಸಂಪೂರ್ಣ ಭರ್ತಿ ಆಗಿದೆ. ಈ ಹಿನ್ನೆಲೆ ದೂದಗಂಗಾ ನದಿ ಮೂಲಕ ಕೃಷ್ಣಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 8.5 ಟಿಎಂಸಿ ಸಾಮಥ್ರ್ಯದ ರಾಧಾನಗರಿ ಜಲಾಶಯದಿಂದ 4 ಗೇಟಗಳ ಮೂಲಕ 10 ಸಾವಿರ ಕ್ಯೂಸೆಕ್ ನೀರು ದೂದ್ ಗಂಗಾ ನದಿಗೆ ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ನೀರು ಬಿಡುಗಡೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ದೂದ್ ಗಂಗಾ ನದಿ ತೀರದ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.
ಮುಲ್ಲಾಮಾರಿ ಜಲಾಶಯದಿಂದ 1,200 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಹಲಕೋಡ ಗ್ರಾಮದ ಬಳಿ ಕಾಗಿಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕರ್ನಾಟಕ-ತೆಲಂಗಾಣ ಕೊನೆ ಗ್ರಾಮವಾಗಿರೋ ಹಲಕೋಡ ಗ್ರಾಮದಲ್ಲಿ ನಿರಂತರ ಮಳೆಗೆ ಕಾಗಿಣಾ ನದಿ ಮೈದುಂಬಿದೆ. ಮುಲ್ಲಾಮಾರಿ ಡ್ಯಾಂ ಭರ್ತಿಯಾಗಿದ್ದರಿಂದ ನದಿಗೆ ನೀರು ಬಿಡಲಾಗ್ತಿದೆ.
ಕಲಬುರಗಿ – ಕೊಚ್ಚಿ ಹೋದ ಜಾನುವಾರು
ಇನ್ನು ಕಲಬುರಗಿಯ ಕಮಲಾಪುರ ತಾಲೂಕಿನ ಕುದಮೂಡ್ ಗ್ರಾಮದಲ್ಲಿ ಹಳ್ಳದ ನೀರಿನಲ್ಲಿ ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ. ರೈತರು ಹೊಲಕ್ಕೆ ಹೋಗುವಾಗ ಈ ದುರಂತ ಸಂಭವಿಸಿದೆ. ನೀರಿನ ರಭಸಕ್ಕೆ ರೈತರ ಎದುರಲ್ಲೇ ಜಾನುವಾರುಗಳು ಕೊಚ್ಚಿ ಹೋಗಿದೆ.
ಉತ್ತರ ಕನ್ನಡ – ದೇವಿಮನೆ ಘಟ್ಟದ ಬಳಿ ಮತ್ತೆ ಭೂಕುಸಿತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಮತ್ತೆ ಭೂ ಕುಸಿತವಾಗಿದೆ. ಕುಮಟಾ ತಾಲೂಕಿನ ದೇವಿಮನೆ ಘಟ್ಟದ ಕ್ಷೇತ್ರ ಪಾಲೇಶ್ವರ ದೇವಸ್ಥಾನದ ಬಳಿ ರಸ್ತೆಯ ಅಂಚಿನವರೆಗೂ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಕಳೆದ 3 ದಿನದ ಹಿಂದೆ ಈ ಭಾಗದಲ್ಲಿ ನಿರಂತರ ಭೂ ಕುಸಿತವಾಗುತ್ತಿರುವ ಬಗ್ಗೆ `ಪಬ್ಲಿಕ್ ಟಿವಿ’ ವರದಿ ಬಿತ್ತರಿಸಿತ್ತು. ಡಿಸೆಂಬರ್ 2024ರಲ್ಲಿ ಇದೇ ಭಾಗದಲ್ಲಿ 3 ಸೆಕೆಂಡ್‍ನಷ್ಟು ಭೂಮಿ ಕಂಪಿಸಿತ್ತು. ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದ ಭೂ ವಿಜ್ಞಾನಿಗಳು ಸಹ ಸ್ಥಳ ಪರಿಶೀಲನೆ ನಡೆಸಿ ಮಣ್ಣಿನ ಪದರ ಸಡಿಲವಾಗಿರುವ ಕುರಿತು ಮಾಹಿತಿ ನೀಡಿದ್ದರು. ಇದೀಗ ಮತ್ತೆ ಇದೇ ಭಾಗದಲ್ಲಿ ಭೂ ಕುಸಿತವಾಗಿದೆ.
ಕೊಡಗು – ಮನೆ ಕುಸಿದು ಮಹಿಳೆ ಸಾವು
ಮಳೆಗೆ ಕೊಡಗು ಜಿಲ್ಲೆಯಲ್ಲಿ ಮನೆ ಕುಸಿದು ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಗ್ರಾಮದಲ್ಲಿ ಬೆಳಿಗ್ಗೆ 5:30ರ ಸುಮಾರಿಗೆ ದುರಂತ ಸಂಭವಿಸಿದೆ. ಮಳೆ ಗಾಳಿಗೆ ಮನೆಯೊಂದು ಕುಸಿದು ಬಿದ್ದು ಸುಷ್ಮಾ ಎಂಬುವರು ಮೃತಪಟ್ಟಿದ್ದಾರೆ. ಮೂವರು ಮಕ್ಕಳು ಮತ್ತು ಆಕೆಯ ಸಹೋದರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾವೇರಿಯಲ್ಲಿ 4 ಮನೆ ಕುಸಿತ
ಹಾವೇರಿ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಪರಿಣಾಮ ಒಂದೇ ದಿನ 4 ಮನೆಗಳು ಕುಸಿದು ಬಿದ್ದಿವೆ. ಹಾವೇರಿ ತಾಲೂಕಿನ ದೇವಗಿರಿ ಯಲ್ಲಾಪುರ ಗ್ರಾಮದಲ್ಲಿ 3 ಮನೆಗಳು ಕುಸಿದು ಬಿದ್ದಿದೆ. ಗ್ರಾಮದ ಸಂಜನಾ ದಳವಾಯಿ ಕುಟುಂಬ ಸದಸ್ಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಬ್ಯಾಡಗಿ ತಾಲೂಕು ಚಿಕ್ಕಣಜಿ ಗ್ರಾಮದ ಮೃತ್ಯುಂಜಯ ಬನ್ನಿಹಳ್ಳಿ ಎಂಬುವರ ಮನೆ ಗೋಡೆ ಕುಸಿತವಾಗಿದೆ. ಮನೆಯಲ್ಲಿ ಎಲ್ಲ ವಸ್ತುಗಳು ಸಂಪೂರ್ಣ ನಾಶವಾಗಿದೆ
ಮಂಡ್ಯ – ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಳ
ಇನ್ನು ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮತ್ತೆ ಅಬ್ಬರಿಸುತ್ತಿದೆ. ಹೀಗಾಗಿ ಶ್ರೀರಂಗಪಟ್ಟಣದ ಕೆಆರ್‍ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಡ್ಯಾಂನ ಒಳಹರಿವು 25,506 ಕ್ಯೂಸೆಕ್‍ಗೆ ಏರಿಕೆ ಆಗಿದೆ. ಜಲಾಶಯದಿಂದ 23,878 ಕ್ಯೂಸೆಕ್ ನೀರು ಹೊರಬಿಡಲಾಗ್ತಿದೆ. ರಾಜ್ಯದಲ್ಲಿ ಮತ್ತೆ ಮಳೆ ಚುರುಕು ಪಡೆದುಕೊಂಡಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸುತ್ತಿದೆ.