ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆ ಇಂದು ಕೂಂಚ ಬಿಡುವು ನೀಡಿದೆ. ಆದರೆ ವಿರಾಜಪೇಟೆ ತಾಲೂಕಿನಲ್ಲಿ ಮಳೆಯಿಂದ ಗ್ರಾಮಾಂತರ ಪ್ರದೇಶದ ತೋಡುಗಳು ಹಾಗೂ ಕದನೂರು ಉಪ ನದಿ ಉಕ್ಕಿ ಹರಿದು ಭತ್ತದ ಗದ್ದೆಗಳು ಜಲಾವೃತವಾಗಿವೆ.
ರಸ್ತೆ ಸಂಚಾರಕ್ಕೆ ಸದ್ಯಕ್ಕೆ ತೊಂದರೆಯಾಗಿಲ್ಲ. ಅರ್ಜಿ ಗ್ರಾಮದಿಂದ ಸಾಗಿ ಕಾವೇರಿ ಒಡಲು ಸೇರುವ ಕದನೂರು ನದಿಯು ಕೆದಮುಳ್ಳುರು, ಕದನೂರು, ಅರಮೇರಿ ಭಾಗದಲ್ಲಿ ಉಕ್ಕಿ ಹರಿಯುತ್ತಿದ್ದು, ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಭೇತ್ರಿ ಗ್ರಾಮದಲ್ಲಿ ಸಹ ಕಾವೇರಿ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಭೇತ್ರಿ ಸಮೀಪದ ಪಾರಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನದಿಯಲ್ಲಿ ಸಂಪೂರ್ಣ ಮುಚ್ಚಿಹೋಗಿದೆ. ಇದರಿಂದ ಐದಾರು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
Advertisement
Advertisement
ಭಾಗಮಂಡಲ ಭಾಗದಲ್ಲಿ ಇಂದು ಬೆಳಗ್ಗೆಯಿಂದ ಧಾರಕಾರ ಮಳೆಯಾಗುತ್ತಿದ್ದು, ಕೃಷಿಗೆ ಮಳೆ ಪೂರಕವಾದರೂ ಬಿರುಸಿನ ಮಳೆಯಿಂದ ಕೃಷಿಕರು ಕೆಲಸ ಸ್ಥಗಿತಗೊಳಿಸಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಮಳೆ ಕಾರಣ ವಿದ್ಯುತ್ ವ್ಯವಸ್ಥೆ ಇನ್ನೂ ಸುಧಾರಣೆಯಾಗಿಲ್ಲ. ಕೆಲವು ಗ್ರಾಮಗಳು ಕತ್ತಲಲ್ಲಿಯೇ ಇವೆ. ಗಾಳಿ ಮಳೆಗೆ ಅಲ್ಲಲ್ಲಿ ಮರ, ಕೊಂಬೆಗಳು ಮುರಿದು ವಿದ್ಯುತ್ ಕಂಬ ಬೀಳುತ್ತಿವೆ. ಸೆಸ್ಕ್ ಒಂದು ಕಡೆಯಿಂದ ದುರಸ್ತಿ ಮಾಡಿದರೂ ಮತ್ತೆ ಪ್ರಾಕೃತಿಕ ಆಡಚಣೆಯಿಂದ ವಿದ್ಯುತ್ ಸಂಪರ್ಕ ಸಾಧ್ಯವಾಗುತ್ತಿಲ್ಲ.
Advertisement
Advertisement
ಕೊಪ್ಪ ತಾಲೂಕಿನ ಸೂರ್ಯ ದೇವಾಸ್ಥಾನದ ಸಮೀಪ ಮಿನಿ ಸೇತುವೆಯೊಂದು ಕುಸಿದಿದ್ದು, ಮಂಗಳೂರು- ಚಿತ್ರದುರ್ಗ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಕಳೆದೊಂದು ತಿಂಗಳ ಹಿಂದಷ್ಟೇ ಈ ಮಿನಿ ಸೇತುವೆಯ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಆದರೆ ಒಂದೇ ಮುಂಗಾರು ಮಳೆಗೆ ಸೇತುವೆ ಕುಸಿದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಯಾವ ಪ್ರಮಾಣದಲ್ಲಿ ಈ ಸೇತುವೆಯ ಕಾಮಗಾರಿ ಕಳಪೆಯಾಗಿರಬಹುದು ಎಂಬ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರನ ವಿರುದ್ಧ ಜನ ಆಕ್ರೋಶ ಹೊರಹಾಕ್ತಿದ್ದಾರೆ.