ಬೆಂಗಳೂರು: ಕೇರಳ, ಕೊಡಗಿನಲ್ಲಿ ಸುರಿಯುತ್ತಿರುವ ಮಳೆ ಮೈಸೂರಿನಲ್ಲಿ ನೆರೆ ಸೃಷ್ಟಿಸಿದೆ. ಕಬಿನಿ, ಕೆಆರ್‍ಎಸ್‍ಗೆ ನೀರಿನ ಹರಿವು ಹೆಚ್ಚಾಗಿದ್ದು, ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಪ್ರವಾಹ ಉಂಟಾಗಿದೆ. ಮಡಿಕೇರಿಯಲ್ಲಿ ವರುಣ ಅಬ್ಬರಿಸುತ್ತಿರೋದ ನೇರ ಪರಿಣಾಮ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆ ಮೇಲಾಗಿದೆ. ತುಂಬಿ ತುಳುಕುತ್ತಿರೋ ಕೆಆರ್‍ಎಸ್ ಮತ್ತು ಕಬಿನಿ ಜಲಾಶಯಗಳಿಂದ 2 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರಬಿಡಲಾಗ್ತಿದೆ. ಪರಿಣಾಮ ಎಲ್ಲೆಲ್ಲೂ ಪ್ರವಾಹ ಸ್ಥಿತಿ ಏರ್ಪಟ್ಟಿದೆ.
ಕಪಿಲಾ ನದಿ ಪ್ರವಾಹಕ್ಕೆ ದಕ್ಷಿಣ ಕಾಶಿ ನಂಜನಗೂಡು ಕ್ಷೇತ್ರ ನಲುಗಿ ಹೋಗಿದೆ. ಹಲವು ದೇವಸ್ಥಾನಗಳು ಈಗಾಗಲೇ ಮುಳುಗಿ ಹೋಗಿವೆ. ಭಕ್ತರ ಪರದಾಟ ಮುಂದುವರೆದಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವರಾದ ಜಿಟಿ ದೇವೇಗೌಡ, ಆರ್ ವಿ ದೇಶಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಬಿನಿ ಅಬ್ಬರಕ್ಕೆ ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಮುಳುಗಡೆಯಾಗಿದೆ. ಮೈಸೂರಿನಿಂದ ತಮಿಳುನಾಡು, ಕೇರಳ, ಚಾಮರಾಜನಗರ ಹಾಗೂ ಗುಂಡ್ಲುಪೇಟೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್ ಆಗಿದೆ. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪರ್ಯಾಯ ರಸ್ತೆಯೂ ಸಹ ಮುಳುಗುವ ಭೀತಿಯಲ್ಲಿದೆ.
ಕೆಆರ್‍ಎಸ್ ಜಲಾಶಯನಿಂದ ಅಪಾರ ನೀರು ಹೊರಬಿಡಲಾಗ್ತಿರೋ ಕಾರಣ ಶ್ರೀರಂಗಪಟ್ಟಣದ ಮೇಳಾಪುರ ಗ್ರಾಮದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರ ಜಲಾವೃತವಾಗಿದೆ. ಸುತ್ತಮುತ್ತಲ ಗ್ರಾಮಗಳಲ್ಲಿ ಕತ್ತಲು ಆವರಿಸಿದೆ. ವೆಲ್ಲೆಸ್ಲಿ ಸೇತುವೆ ಮುಳುಗುವ ಭೀತಿಯಲ್ಲಿದ್ದು, ಸೇತುವೆ ಮೇಲೆ ಯಾರೂ ಓಡಾಡದಂತೆ ತಡೆಗೋಡೆ ನಿರ್ಮಿಸಲಾಗಿದೆ.
ಕೊಳ್ಳೇಗಾಲ ತಾಲೂಕಿನ ಕಾವೇರಿ ಕೊಳ್ಳದ ಹತ್ತಾರು ಗ್ರಾಮಗಳು ಜಲಾವೃತವಾಗಿವೆ. ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಜನತೆ ಜಾನುವಾರ ಸಮೇತ ಗ್ರಾಮಗಳನ್ನ ತೊರೆಯುತ್ತಿದ್ದಾರೆ. ಆದರೆ ದಾಸನಪುರದಿಂದ ಬೇರೆ ಕಡೆ ಹೋಗಲು ವೃದ್ಧ ದಂಪತಿ ನಿರಾಕರಿಸುತ್ತಿದ್ದಾರೆ. ಎಲ್ಲೆಲ್ಲೂ ಆತಂಕ ಆವರಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv