ಬೆಂಗಳೂರು/ಮಂಗಳೂರು: ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ ಮಳೆರಾಯ ರುದ್ರ ತಾಂಡವವಾಡಿದ್ದಾನೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಹೊಡೆದು 6 ಮಂದಿ ಸಾವನ್ನಪ್ಪಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡಿರುವ ‘ಮೆಕುನು’ ಚಂಡಮಾರುತದಿಂದಾಗಿ ಮಳೆರಾಯ ಆರ್ಭಟಿಸುತ್ತಿದ್ದಾನೆ.
ರಾಜ್ಯದ ವಿವಿಧ ಭಾಗಗಳಲ್ಲಿ ಸಿಡಲಿಗೆ 6 ಮಂದಿ ಬಲಿಯಾಗಿದ್ದಾರೆ. ತುಮಕೂರಿನ ಪಾವಗಡದಲ್ಲಿ 45 ವರ್ಷದ ರಾಮಕೃಷ್ಣ ಎಂಬವರು ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನ ರಾಮಾ ಕ್ಯಾಂಪಿನಲ್ಲಿ 37 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಗದಗಲ್ಲಿ 15 ವರ್ಷದ ಕುರಿಗಾಹಿ ಮುತ್ತಪ್ಪ ಬಲಿಯಾಗಿದ್ದಾರೆ. ಹಾವೇರಿಯ ಸವಣೂರಿನ 30 ವರ್ಷದ ರೈತ ಸುಭಾಸ ಕುರುಬರ ಎಂಬವರು ಸಾವನ್ನಪ್ಪಿದ್ದು, ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲಿದ್ದ ಕುರಿ ಹಾಗೂ ನಾಯಿಯೂ ಸಾವನ್ನಪ್ಪಿದೆ.
Advertisement
Advertisement
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗುತ್ತೂರು ಗ್ರಾಮದಲ್ಲಿ ವಿರೂಪಾಕ್ಷಪ್ಪ ಮಾಸರ(25), ಕರಿಯವ್ವ ಹನುಮಪ್ಪ ಮಾಸರ (18) ಎಂಬವರು ಹೊಲದಲ್ಲಿ ಕೆಲಸ ಮಾಡುವ ವೇಳೆ ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಶಿರನಾಳ ಗ್ರಾಮದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ದಾವಣಗೆರೆ ನಗರದ ಕೆಲವೆಡೆ ತಗ್ಗು ಪ್ರದೇಶಗಳಿಗೆ ಚರಂಡಿ ನೀರು ನುಗ್ಗಿದೆ. ಇನ್ನು ರಾಜ್ಯದ ಹಲವೆಡೆ ಮರಗಳು ಧರೆಗುರುಳಿದ ಘಟನೆಗಳು ಸಹ ವರದಿಯಾಗಿದೆ. ಹಂಪಿಯಲ್ಲೂ ಇಂದು ಸಂಜೆ ಜೋರು ಮಳೆಯಾಗಿದೆ.
Advertisement
ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 1 ಗಂಟೆ ಬಳಿಕ ನಗರದ ಕೆಲವೆಡೆ ಮಳೆ ಜೋರಾಯಿತು. ಒಂದು ಹಂತದಲ್ಲಿ ಮಳೆಯ ತೀವ್ರತೆ ಎಷ್ಟಿತ್ತೆಂದರೆ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನಕ್ಕೆ ಮಳೆರಾಯ ಅಡ್ಡಿಯಾಗುತ್ತಾನೆ ಎಂದೇ ಭಾವಿಸಲಾಗಿತ್ತು. ಆದರೆ ಸಂಜೆ 4 ಗಂಟೆ ವೇಳೆಗೆ ವಿಧಾನಸೌಧದ ಸುತ್ತಮುತ್ತ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಪೂರ್ವನಿಗದಿಯಂತೆ ವಿಧಾನಸೌಧದ ಮೆಟ್ಟಿಲಿನಲ್ಲೇ ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸಿದರು.
Advertisement
ಬೆಂಗಳೂರು ನಗರದ ಎಂ.ಎಸ್.ಪಾಳ್ಯ, ಯಲಹಂಕ, ಹೆಸರಘಟ್ಟ, ಜಾಲಹಳ್ಳಿ, ಕೆಆರ್ ಸರ್ಕಲ್, ಪದ್ಮನಾಭ ನಗರದಲ್ಲಿ ಭಾರಿ ಮಳೆಯಾಗಿದೆ. ಉಳಿದಂತೆ ರಾಜ್ಯದ ತುಮಕೂರು, ರಾಯಚೂರು, ಗದಗ, ಕೋಲಾರ, ನೆಲಮಂಗಲ, ಆನೇಕಲ್ ಭಾಗಗಳಲ್ಲಿ ಮಳೆಯಾಗಿದೆ.
ಮೆಕುನು ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು, ಗುರುವಾರ ಇನ್ನಷ್ಟು ಉಗ್ರಸ್ವರೂಪ ಪಡೆಯುವ ಸಾಧ್ಯತೆಯಿದೆ. ಭಾರತದಲ್ಲಿ ಈ ಚಂಡಮಾರುತದ ತೀವ್ರತೆ ಅಷ್ಟಾಗಿ ಕಾಣಿಸದಿದ್ದರೂ ಕರ್ನಾಟಕ ಹಾಗೂ ತಮಿಳುನಾಡಿನ ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಕರಾವಳಿ ಹಾಗೂ ತೆಲಂಗಾಣದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಈ ಬಾರಿಯ ಮುಂಗಾರು ಮೇ 29ರಂದು ಕೇರಳವನ್ನು ತಲುಪಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.