ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆ ಆರ್ಭಟ ದಿನದಿಂದ ದಿನಕ್ಕೆ ಒಂದೊಂದೇ ಜಿಲ್ಲೆಗೆ ವ್ಯಾಪಿಸುತ್ತಿದೆ. ಕರಾವಳಿಯಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು ನದಿಯಲ್ಲಿ ಮಹಿಳೆ ಒಬ್ಬರು ಬಿದ್ದು ಮೃತಪಟ್ಟಿದ್ದಾರೆ.
ಬೆಳ್ತಂಗಡಿಯ ಶಿರ್ಲಾಲಿನಲ್ಲಿ ತುಂಬಿ ಹರಿಯುತ್ತಿದ್ದ ಹೊಳೆಗೆ ಬಿದ್ದು ರೇವತಿ (50) ಸಾವನ್ನಪ್ಪಿದ್ದಾರೆ. ಕೊಡಗಿನಲ್ಲಿ ಸೋಮವಾರಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಕೊಂಬೆ ಬಿದ್ದು, 67 ವರ್ಷದ ಪಿ.ಸಿ ಅಹ್ಮದ್ ಕುಟ್ಟಿ ಹಾಜಿ ಮೃತರಾದ್ರೆ, ಕುಶಾಲನಗರದ ಗುಮ್ಮನಕೊಲ್ಲಿಯ ಕಾವೇರಿ ನದಿಯಲ್ಲಿ ಮೈಸೂರು ಮೂಲದ ರಮೇಶ್ ಎಂಬವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹಾಸನದ ಸಕಲೇಶಪುರ ತಾಲೂಕಿನ ಕಳಲೇ ಗ್ರಾಮದಲ್ಲಿ ಪುಟ್ಟಯ್ಯ (60) ಎಂಬರ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಂಗಳೂರಿನ ಕಾರ್ ಸ್ಟ್ರೀಟ್‍ನಲ್ಲಿ ಗಾಳಿ ಮಳೆಗೆ ಬೃಹತ್ ಮರಗಳು ಧರೆಗುರುಳಿದ್ದು, ಹಳೇ ಕಟ್ಟಡ ಕುಸಿದು ಬಿದ್ದಿದೆ. ಬಿರುಗಾಳಿ ಜೊತೆಗೆ ಕಡಲಿನ ರೌದ್ರ ನರ್ತನ ಜೋರಾಗಿದ್ದು, ಸಮುದ್ರ ಬದಿಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಭಾರೀ ಮಳೆಯಾಗಿದ್ದು, ನಗರವೊಂದರಲ್ಲೇ ಕಳೆದ 24 ಗಂಟೆಗಳಲ್ಲಿ 153.4 ಮಿಲಿ ಮೀಟರ್ ಮಳೆಯಾಗಿದೆ. ಇದೇ ವೇಳೆ ಭಟ್ಕಳದ ಶಿರಾಲಿ ಅಳವೆಕೋಡಿ ಭಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ರಸ್ತೆ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದೆ.
ಚಿಕ್ಕಮಗಳೂರಿನಲ್ಲಿ ಕಳೆದ 48 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿದ್ದು, ಮೂಡಿಗೆರೆ, ಕಳಸದಲ್ಲಿ ಭಾಗದಲ್ಲಿ ಭಾರೀ ಜನರು ಸಮಸ್ಯೆ ಎದುರಿಸಿದ್ದಾರೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೊಡಗಿನ ಸೋಮವಾರಪೇಟೆ ತಾಲೂಕಿನ ಕುಂಬೂರಿನಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಂಗನವಾಡಿಯ ಕಾಂಪೌಂಡ್ ಮೇಲೆ ಮರ ಬಿದ್ದು ಜಖಂ ಗೊಂಡಿದೆ. ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಇಂದು ಸಂಜೆ ವೇಳೆ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದ ಪರಿಣಾಮ ನಗರದ ವಿವಿಧೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿವೆ.
ಮುಂಗಾರು ಮಳೆ ಶಿವಮೊಗ್ಗ ಜಿಲ್ಲೆಯನ್ನು ದಟ್ಟವಾಗಿ ಆಕ್ರಮಿಸುತ್ತಿದ್ದು, ತೀರ್ಥಹಳ್ಳಿ ತಾಲೂಕು ಹೊರಬೈಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಪುಟ್ಟ ಸೇತುವೆ ಕೊಚ್ಚಿ ಹೋಗಿದೆ. ಸತತ ಮಳೆಯಿಂದ ಶಿವಮೊಗ್ಗ ಸೇರಿ, ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲಿನ ಕೆರೆ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಗಾ, ವರದ, ಶರಾವತಿ ನದಿಗಳಲ್ಲಿ ಕ್ರಮೇಣ ನೀರು ತುಂಬುತ್ತಿವೆ. ಕಳೆದ ನಾಲ್ಕು ದಿನಗಳಲ್ಲಿ ಸರಾಸರಿ 58 ಮಿಲಿ ಮೀಟರ್ ಮಳೆ ಶಿವಮೊಗ್ಗ ಜಿಲ್ಲೆಯಲ್ಲಿ ಆಗಿದೆ. ತೀರ್ಥಹಳ್ಳಿಯಲ್ಲಿ 64, ಹೊಸನಗರದಲ್ಲಿ 85, ಸಾಗರದಲ್ಲಿ 80 ಮಿಲಿ ಮೀಟರ್ ಮಳೆಯಾಗಿದೆ.
ಬೆಂಗಳೂರಿನಲ್ಲಿ ಇನ್ನೂ ಮೂರು ದಿನಗಳ ಕಾಲ ಮೋಡ ಕವಿದ ವಾತಾವರಣ ಮತ್ತು ಹಗುರವಾದ ಸಾಧಾರಣ ಮಳೆ ಹಾಗೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮೂರು ದಿನ ಭಾರೀ ಮಳೆ ಕುರಿತು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
https://www.youtube.com/watch?v=2NCzafRx74I
https://www.youtube.com/watch?v=N1bhCcCelos