ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂದು ಕೂಡಾ ಮಳೆಯಾಗಿದೆ. ಹಾವೇರಿಯಲ್ಲಿ (Haveri) ಸಿಡಿಲು ಬಡಿದು 30 ಕುರಿಗಳು ಸಾವನ್ನಪ್ಪಿವೆ. ಮಂಗಳೂರು (Mangaluru Rain) ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಆರ್ಭಟ ಮಾಡಿದೆ. ಎಲ್ಲೆಡೆ ಸಿಡಿಲು ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದೆ.
ಜಿಲ್ಲೆಯ ಕಡಬ ತಾಲೂಕಿನಾದ್ಯಂತ ಭಾರೀ ಮಳೆ ಸುರಿದಿದ್ದು, ಕಡಬ, ಕೋಡಿಂಬಾಳ, ನೆಲ್ಯಾಡಿಯಲ್ಲಿ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಗೆ ನೆಲ್ಯಾಡಿ ಪೇಟೆ ಸಂಪೂರ್ಣ ಜಲಾವೃತವಾಗಿದೆ. ಇದನ್ನೂ ಓದಿ: ಶಿರಾದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು 30 ಕ್ಕೂ ಹೆಚ್ಚು ಶಾಸಕರಿಂದ ಮನವಿ
ಕಡಬದ ಪಂಜೋಡಿಯಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಮಂಗಳೂರು ನಗರದಲ್ಲೂ ಕೆಲ ಕಾಲ ಭಾರೀ ಗಾಳಿ ಜೊತೆ ಮಳೆಯಾಗಿದೆ. ನಿನ್ನೆ ಪುತ್ತೂರಿನಲ್ಲಿ ಭಾರೀ ಮಳೆಯಾಗಿತ್ತು. ಪುತ್ತೂರಿನ ಬಪ್ಪಳಿಗೆ ಬಳಿ ಭಾರೀ ಗಾಳಿ ಮಳೆಗೆ ಮನೆ ಮೇಲೆ ತೆಂಗಿನ ಮರ ಬಿದ್ದು, ಮನೆ ಹಾನಿಗೀಡಾಗಿದೆ. ಮನೆಯವರು ಹೊರಗೆ ಕೆಲಸ ಮಾಡುತ್ತಿದ್ದ ವೇಳೆ ಮರ ಬಿದ್ದ ಕಾರಣ ಭಾರೀ ದುರಂತ ತಪ್ಪಿದೆ.
ಮಡಿಕೇರಿಯಲ್ಲೇನಾಯ್ತು..?:
ಕೊಡಗಿನ (Kodagu Rain) ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಸುರಿದಿದ್ದು ಇಳೆ ತಂಪಾಗಿದೆ. ಮಡಿಕೇರಿ, ಸುಂಟಿಕೊಪ್ಪ, ಗಾಳಿಬೀಡು, ಮದೆನಾಡು ಸೇರಿದಂತೆ ಹಲವೆಡೆ ಮಳೆ ಬಿದ್ದಿದೆ. ಗುಡುಗು ಸಿಡಿಲಿನೊಂದಿಗೆ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಇದನ್ನೂ ಓದಿ: ಚೆಕ್ ಬೌನ್ಸ್ ಕೇಸ್ – ಮಾಜಿ ಸಚಿವ ಬಿ.ನಾಗೇಂದ್ರಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್
ಹಾವೇರಿ ಜಿಲ್ಲೆಯಲ್ಲಿ ಸಿಡಿಲಿಗೆ 30 ಕುರಿ ಸಾವು
ಹಾವೇರಿಯ ಹಿರೇಕೆರೂರು ತಾಲೂಕಿನ ಹುಲಬಿಕೊಂಡ ಗ್ರಾಮದಲ್ಲಿ ಸಿಡಿಲು ಬಡಿದು 30 ಕುರಿಗಳು ಸಾವನ್ನಪ್ಪಿವೆ. ಹಾನಗಲ್ ತಾಲೂಕಿನ ಕುರಿಗಾಯಿ ಈಟೇಪ್ಪ ಬನ್ನಿ ಎಂಬವರಿಗೆ ಸೇರಿದ ಕುರಿಗಳು ಸಾವಿಗೀಡಾಗಿವೆ. ಸ್ಥಳಕ್ಕೆ ಶಾಸಕ ಯು.ಬಿ. ಬಣಕಾರ ಭೇಟಿ ನೀಡಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಹಿರೇಕೆರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.