-ಕೊಡಗಿನಲ್ಲಿ ಮತ್ತೆ ಮಹಾಮಳೆಯ ಮುನ್ಸೂಚನೆ
ಬೆಂಗಳೂರು/ನವದೆಹಲಿ: ಈ ಸಲ ದೇಶದಲ್ಲಿ ತುಂಬಾ ಲೇಟಾಗಿ ಅಬ್ಬರಿಸೋಕೆ ಶುರು ಮಾಡಿದ್ದ ವರುಣ, ಹಲವೆಡೆ ಉಗ್ರ ರೂಪ ತಾಳಿದ್ದಾನೆ. ಮಳೆರಾಯನ ಮುನಿಸಿಗೆ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಕೋಟ್ಯಂತರ ಜನರು ಸಂಕಷ್ಟದಲ್ಲಿ ದಿನ ದೂಡ್ತಿದ್ದಾರೆ. ರಸ್ತೆಗಳೆಲ್ಲಾ ಕೊಚ್ಚಿಹೋಗಿದ್ದು, ಕಾರು, ಬೈಕ್ ಎಲ್ಲಾ ಮನೇಲಿ ನಿಲ್ಲಿಸಿ ದೋಣಿಯಲ್ಲಿ ಓಡಾಡುತ್ತಿದ್ದಾರೆ.
Advertisement
ಇತ್ತ ಈ ಬಾರಿ ಕೊಡಗಿನಲ್ಲಿ ಮಳೆ ಅಷ್ಟೊಂದಿಲ್ಲ. ಆದರೂ ಜನ ಮಾತ್ರ ಆತಂಕದಲ್ಲೇ ದಿನ ದೂಡ್ತಿದ್ದಾರೆ. ಯಾಕೆಂದರೆ ಭಾರಿ ಮಳೆಯಾಗುತ್ತೆ ಎಂದು ಹವಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಅಲ್ಲದೆ ಶನಿವಾರ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಕೂಡ ಘೋಷಿಸಲಾಗಿತ್ತು. ಆದರೆ ನೀರಿಕ್ಷೆ ಮಾಡಿದಷ್ಟು ಮಳೆ ಮಳೆಯಾಗದ ಕಾರಣಕ್ಕೆ ಜಿಲ್ಲಾಡಳಿತ ಮತ್ತೆ ಆರೆಂಜ್ ಅಲರ್ಟ್ ಘೋಷಿಸಿದೆ.
Advertisement
Advertisement
ಜುಲೈ 25ರವರೆಗೆ ಮಳೆಯಾಗುತ್ತೆ ಎಂಬ ಮಾಹಿತಿ ಇದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು ಸ್ವಲ್ಪ ಎಚ್ಚರವಾಗಿರಿ ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಅಲ್ಲದೆ ಎನ್‍ಡಿಆರ್‍ಎಫ್ ತಂಡ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದು, ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಹಾಯವಾಣಿ ತೆರೆದಿದ್ದು, ತುರ್ತು ಸಂದರ್ಭದಲ್ಲಿ ಕರೆ ಮಾಡುವಂತೆ ಸೂಚಿಸಲಾಗಿದೆ.
Advertisement
ಇತ್ತ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿದ್ದು, ಸಕಲೇಶಪುರ-ಸುಬ್ರಹ್ಮಣ್ಯ ಘಾಟ್‍ನ ಸಿರಿಬಾಗಿಲು ಬಳಿ ರೈಲ್ವೇ ಹಳಿ ಮೇಲೆ ಭೂಕುಸಿತವಾಗಿದೆ. ಬೆಟ್ಟದಿಂದ ರೈಲು ಹಳಿ ಮೇಲೆ ಕಲ್ಲು ಮಣ್ಣು ಬೀಳುತ್ತಿದ್ದು, ಕಾರ್ಮಿಕರು ತೆರವು ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ಮಂಗಳೂರು-ಬೆಂಗಳೂರು ರೈಲು ಸಂಚಾರವನ್ನು ಎರಡು ದಿನ ಸ್ಥಗಿತಗೊಳಿಸಲಾಗಿದೆ.
ವಿಜಯಪುರ ಜಿಲ್ಲೆ ಶಿವಣಗಿಯಲ್ಲಿ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ. ಉಡುಪಿಯಲ್ಲಿ 101 ಎಂಎಂ, ಕುಂದಾಪುರದಲ್ಲಿ 99.02 ಎಂಎಂ, ಕಾರ್ಕಳದಲ್ಲಿ 105 ಮಿಲಿಮೀಟರ್ ದಾಖಲೆ ಮಳೆ ಆಗಿದೆ. ಉಡುಪಿಯ ಸಮುದ್ರಕ್ಕೆ ಇಳಿದಂತೆ ಮೀನುಗಾರರಿಗೆ ವಾರ್ನಿಂಗ್ ಕೊಡಲಾಗಿದೆ. ಬೆಂಗಳೂರು ಮತ್ತು ಸುತ್ತಮುತ್ತ ತುಂತುರು ಮಳೆ, ಮೋಡ ಕವಿದ ವಾತಾವರಣವಿದೆ.
ಆದರೆ ಕರಾವಳಿಯಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಶನಿವಾರ ಹವಾಮಾನ ಇಲಾಖೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಎಚ್ಚರಿಕೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ ಕರಾವಳಿಯ ಕೆಲವು ಭಾಗದಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದ್ದು, ನೇತ್ರಾವತಿ ಇನ್ನೂ ತುಂಬಿಕೊಂಡಿಲ್ಲ. ಅಲ್ಲದೆ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಹಾಗೆಯೆ ವಾಯುಭಾರ ಕುಸಿತದಿಂದಾಗಿ ಇನ್ನೂ ಎರಡು ದಿನ ಮಳೆಯಾಗುವ ಮುನ್ಸೂಚನೆ ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಭಾರಿ ಮಳೆಯ ಪ್ರಮಾಣ ತುಂಬ ಕಮ್ಮಿಯಾಗಿದೆ. ಇತ್ತ ಚಿಕ್ಕಮಗಳೂರಿನಲ್ಲೂ ಸಹ ನಿರೀಕ್ಷಿಸಿದಷ್ಟೂ ಮಳೆಯಾಗಿಲ್ಲ.
ಇನ್ನು ಬಿಹಾರದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ರಾಜ್ಯದ 12 ಜಿಲ್ಲೆಗಳಿಗೆ ಪ್ರವಾಹ ವ್ಯಾಪಿಸಿದ್ದು, 67 ಲಕ್ಷ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈವರೆಗೆ ಒಟ್ಟು 97 ಸಾವನ್ನಪ್ಪಿದ್ದು, ಕಳೆದ 24 ಗಂಟೆಯಲ್ಲೇ 19 ಮಂದಿ ಪ್ರಾಣ ಬಿಟ್ಟಿದ್ದಾರೆ. ರಸ್ತೆ, ಹೊಲ, ಮನೆ ಹೀಗೆ ಎಲ್ಲೆಲ್ಲೂ ನೀರು ವ್ಯಾಪಿಸಿದ್ದು, ಜನ ದಿಕ್ಕೇ ತೋಚದಂತಾಗಿದ್ದಾರೆ.
ಈಶಾನ್ಯ ರಾಜ್ಯಗಳಲ್ಲೂ ಪರಿಸ್ಥಿತಿ ಏನೂ ಭಿನ್ನವಾಗಿಲ್ಲ. ಅದರಲ್ಲೂ ಅಸ್ಸಾಂನಲ್ಲಂತೂ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ರಾಜ್ಯದ 33 ಜಿಲ್ಲೆಗಳ ಪೈಕಿ 27ರಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಒಟ್ಟು 3,700ಕ್ಕೂ ಹೆಚ್ಚು ಗ್ರಾಮಗಳು ನೀರಿನಲ್ಲಿ ಮುಳುಗಿಹೋಗಿವೆ. 48 ಲಕ್ಷ ಮಂದಿ ಸಂಕಷ್ಟಕ್ಕೀಡಾಗಿದ್ದು, ಈವರೆಗೆ 59 ಮಂದಿ ಸಾವನ್ನಪ್ಪಿದ್ದಾರೆ. 2 ಲಕ್ಷದ 26 ಸಾವಿರ ಮಂದಿ ಸಂತ್ರಸ್ಥರನ್ನು 1600 ನಿರಾಶ್ರಿತ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ. ಅದ್ರಲ್ಲೂ ಕಾಜಿರಂಗ ಉದ್ಯಾನವನ ಜಲಾವೃತಗೊಂಡಿದ್ದು, ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಈಜುತ್ತಿರುವ ದೃಶ್ಯ ಕರಳು ಕಿತ್ತುಬರುವಂತಿದೆ.
ಇನ್ನು ಪಕ್ಕದ ಕೇರಳದಲ್ಲೂ ಮಳೆಯಬ್ಬರ ಜೋರಾಗಿದ್ದು, ಈವರೆಗೆ ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಇಡುಕ್ಕಿ, ಮಲಪ್ಪುರಂ, ಕೋಝಿಕೋಡ್, ವಯನಾಡ್, ಕಣ್ಣೂರಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜುಲೈ 23ರವರೆಗೆ ಭಾರಿ ಮಳೆಯಾಗಲಿದ್ದು, ಮುಂದಿನ 24 ಗಂಟೆಗಳಲ್ಲಿ 200 ಮಿಲಿಮೀಟರ್ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಮೀನುಗಾರಿಕೆಗೆ ತೆರಳಿದ್ದ ತಮಿಳುನಾಡಿನ ಮೂವರು ನಾಪತ್ತೆಯಾಗಿದ್ದಾರೆ.