ಬೆಳಗಾವಿ: ಮಹರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ ಪ್ರಮುಖ ಎರಡು ಸೇತುವೆಗಳು ಮುಳುಗಡೆಯಾಗಿದೆ.
ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರ – ಕಲ್ಲೋಳ ಹಾಗೂ ಮಾಲಿಕವಾಡ – ದತ್ತವಾಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು ಜಲಾವೃತಗೊಂಡಿವೆ. ಸೇತುವೆಗಳು ಜಲಾವೃತ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪರ್ಯಾಯ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾರೆ.
Advertisement
Advertisement
ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬೀಳುತ್ತಿರುವ ಕಾರಣ ಕ್ಷಣದಿಂದ ಕ್ಷಣಕ್ಕೆ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ. ಸದ್ಯ 90 ಸಾವಿರ ಕ್ಯೂಸೆಕ್ ಗೆ ಒಳ ಹರಿವು ಕೃಷ್ಣಾ ನದಿಯಲ್ಲಿ ಕಂಡು ಬಂದಿದ್ದು, ನದಿ ತೀರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದ್ದು, ನದಿಗೆ ಇಳಿಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ನದಿ ತೀರದಲ್ಲಿ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ನಿಯೋಜನೆ ಮಾಡಿದೆ.
Advertisement
ಚಿಕ್ಕೋಡಿ ತಾಲೂಕು ಅಧಿಕಾರಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ತಾಲೂಕಿನ ಕೆಲವು ಸೇತುವೆಗಳು ಮುಳುಗಡೆಯಾಗಿದ್ದು, ಸದ್ಯ 90 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ನದಿ ಪಾತ್ರದ ಜನರಿಗೆ ಈ ಕುರಿತು ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಸಂಪರ್ಕ ಕಡಿತಗೊಂಡಿರುವ ಗ್ರಾಮಗಳಿಗೆ ದೋಣಿ ಮೂಲಕ ಜನರನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಇನ್ನು ಹೆಚ್ಚಾಗುವ ಸಂಭವವಿದೆ ಎಂದು ತಿಳಿಸಿದ್ದಾರೆ.