ತಿರುವನಂತಪುರಂ: ಭಾರತೀಯ ಹವಾಮಾನ ಇಲಾಖೆ (IMD) ಕೇರಳದ (Kerala) 7 ಜಿಲ್ಲೆಗಳಿಗೆ ಇಂದು (ಶನಿವಾರ) ಯೆಲ್ಲೋ ಅಲರ್ಟ್ ಘೋಷಿಸಿದ್ದು, ರಾಜ್ಯದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಎರ್ನಾಕುಲಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಇಂದು 6 ಸೆಂ.ಮೀ ಹಾಗೂ 11 ಸೆಂ.ಮೀ ನಡುವೆ ಮಳೆಯಾಗುವ (Heavy Rain) ಸಾಧ್ಯತೆಗಳಿವೆ ಎಂದು ಇಲಾಖೆ ಮನ್ಸೂಚನೆ ಕೊಟ್ಟಿದೆ.
ರಾಜ್ಯ ಕಂದಾಯ ಸಚಿವ ಕೆ. ರಾಜನ್ ಪ್ರಕಾರ, ಮೇ 9 ರಿಂದ ಮೇ 23 ರವರೆಗೆ ಕೇರಳದಲ್ಲಿ ಮಳೆಗೆ ಸಂಬಂಧಿಸಿದಂತೆ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. ಇವುಗಳಲ್ಲಿ 6 ಮಂದಿ ಮುಳುಗಿ, ಇಬ್ಬರು ಕ್ವಾರಿ ದುರ್ಘಟನೆಯಲ್ಲಿ, ಇನ್ನಿಬ್ಬರು ಸಿಡಿಲು ಬಡಿದು ಹಾಗೂ ಓರ್ವ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಮೃತಪಟ್ಟಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ – ಎಲ್ಲೆಲ್ಲಿ ಏನೇನು ಅವಾಂತರ?
ನಾಳೆಯಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗುವ ಮುನ್ಸೂಚನೆ ಇದೆ ಎಂದು ತಿಳಿಸಿದ ಸಚಿವರು, ಜಲಮೂಲಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದರು. ರಜೆಯ ಹಿನ್ನೆಲೆಯಲ್ಲಿ ಹೆತ್ತವರು ತಮ್ಮ ಮಕ್ಕಳೊಂದಿಗೆ ನದಿ, ಬೀಚ್ ಪ್ರವೇಶಿಸುವುದನ್ನು ನಿಷೇಧಿಲಾಗಿದೆ ಎಂದರು.
ಸ್ಥಳೀಯ ಅಧಿಕಾರಿಗಳು, ಅಗ್ನಿಶಾಮಕ ಇಲಾಖೆ, ಪೊಲೀಸ್ ಮತ್ತು ಕಂದಾಯ ಇಲಾಖೆಯು ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಯ ಎರಡು ತಂಡಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ. ಶುಕ್ರವಾರ ಸಂಜೆ ರಾಜ್ಯಾದ್ಯಂತ 8 ಪರಿಹಾರ ಶಿಬಿರಗಳಲ್ಲಿ 223 ಮಂದಿಗೆ ವಸತಿ ಕಲ್ಪಿಸಲಾಗಿದೆ.