ಬೆಂಗಳೂರು: ರಾಜ್ಯದಲ್ಲಿ ಇಂದು ಸಹ ಪೂರ್ವ ಮುಂಗಾರು ಮಳೆ (Rain) ಮುಂದುವರಿದಿದ್ದು ಹಲವೆಡೆ ಅವಾಂತರ ಸೃಷ್ಟಿಸಿದೆ. ಚಿಕ್ಕಬಳ್ಳಾಪುರದಲ್ಲಿ (Chikkaballapur) ಬಿರುಗಾಳಿ ಭಾರೀ ಮಳೆಯಾಗಿದ್ದು, ಪುರಾತನ ಕಾಲದ ಅರಳಿ ಮರ ಧರೆಗುರುಳಿದೆ. ಪರಿಣಾಮ ಮರದ ಕೆಳಗಿದ್ದ ಬೈಕ್ ಜಖಂಗೊಂಡಿದೆ. ಇನ್ನೂ ಭಾರೀ ಗಾಳಿ ಮಳೆಗೆ ಈಶಾ ಸದ್ಗುರು ಸನ್ನಧಿಯ ಗೇಟ್ ಬಳಿ ಅಂಗಡಿ ಮೇಲೆ ಬೃಹತ್ ಜಾಹೀರಾತು ಫಲಕ ಉರುಳಿ ಬಿದ್ದಿದೆ. ಪರಿಣಾಮ ಅಂಗಡಿಗೆ ಹಾನಿಯಾಗಿದೆ. ಅದೃಷ್ಟಾವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಚಿಕ್ಕಮಗಳೂರಿನ (Chikkamagaluru) ಕಳಸ ತಾಲೂಕಿನ ಕಗ್ಗನಹಳ್ಳ ಗ್ರಾಮದಲ್ಲಿ ಗಾಳಿ-ಮಳೆ ಅಬ್ಬರಕ್ಕೆ ಗಿರಿಜಾ ಎಂಬವರಿಗೆ ಸೇರಿದ ಮನೆ ಮೇಲೆ ಬೃಹತ್ ಮರ ಬಿದ್ದು ಮನೆ ಸಂಪೂರ್ಣ ಹಾನಿಗೊಳಗಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ಸಿಡಿಲು ಬಡಿದು ಯುವಕ ದುರ್ಮರಣ
ಹಾಸನ (Hassan) ಜಿಲ್ಲೆಯ ವಿವಿಧೆಡೆ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿದೆ. ಮಳೆಯ ಪರಿಣಾಮ ವಿದ್ಯುತ್ ಕೈಕೊಟ್ಟಿದ್ದು, ಜನ ಕತ್ತಲೆಯಲ್ಲಿ ಪರದಾಡಿದ್ದಾರೆ. ಅಲ್ಲದೇ ನಗರದ ಹೌಸಿಂಗ್ ಬೌರ್ಡ್ ಬಳಿ ಕಾರಿನ ಮೇಲೆ ಮರ ಉರುಳಿ ಬಿದ್ದಿದ್ದು, ಕಾರು ಜಖಂಗೊಂಡಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹಾಸನ ನಗರದ ಸಾರಿಗೆ ಬಸ್ ನಿಲ್ದಾಣ ಸಮೀಪ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಮುರಿದು ಬಿದ್ದಿದ್ದು, ಗಂಟೆಗಟ್ಟಲೆ ಟ್ರಾಫಿಕ್ ಜಾಮ್‍ನಿಂದ ಪರದಾಡಿದ್ದಾರೆ.
ಕೊಪ್ಪಳ (Koppal) ಜಿಲ್ಲೆಯ ಯಲಬುರ್ಗಾದ ಹಿರೇಮ್ಯಾಗೇರಿಯಲ್ಲಿ ಹಲವಾರು ಮರಗಳು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದಿದ್ದು, ಪರಿಣಾಮ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮೈಸೂರಿನಲ್ಲಿ ಸಹ ಮಳೆ ಮುಂದುವರಿದಿದ್ದು ಸರಗೂರು ತಾಲ್ಲೂಕಿನ ಬಾಡಿಗೆ ಗ್ರಾಮದಲ್ಲಿ ರೈತ ಜವರಯ್ಯ ಹಾಗೂ ಪುಟ್ಟತಾಯಮ್ಮ ಎಂಬವರಿಗೆ ಸೇರಿದ ಶುಂಠಿ ಬೆಳೆ ನಾಶವಾಗಿದೆ. 4 ಲಕ್ಷ ರೂ. ಹಣ ಖರ್ಚು ಮಾಡಿ ಬೆಳೆದಿದ್ದ ಶುಂಠಿ ಬೆಳೆ ಸಂಪೂರ್ಣ ಕೊಚ್ಚಿ ಹೋಗಿದ್ದು, ರೈತ ಕಣ್ಣೀರಿಟ್ಟಿದ್ದಾನೆ. ಇನ್ನೂ ಪಿರಿಯಾಪಟ್ಟಣದಲ್ಲಿ ಹಲಗನಹಳ್ಳಿಯಲ್ಲಿ ಕಳೆದ 15 ದಿನಗಳ ಹಿಂದೆ ನಾಟಿ ಮಾಡಿದ್ದ 4 ಎಕರೆ ತಂಬಾಕು ಬೆಳೆ ಮಳೆಯಿಂದ ಕೊಚ್ಚಿ ಹೋಗಿದ್ದು, ರೈತ ಕಂಗಾಲಾಗಿದ್ದಾನೆ. ಇದನ್ನೂ ಓದಿ: ಯತೀಂದ್ರಗೆ ಎಂಎಲ್‌ಸಿ ಟಿಕೆಟ್- ಸುಳಿವು ನೀಡಿದ ಸಿದ್ದರಾಮಯ್ಯ