– ಎಲ್ಲೆಲ್ಲಿ ಏನೇನು ಅನಾಹುತವಾಗಿದೆ?
ಬೆಂಗಳೂರು: ಉತ್ತರ ಕರ್ನಾಟಕದ ಕೆಲವು ಭಾಗಗಳು ಹಾಗೂ ಮಲೆನಾಡಿನ ಶಿವಮೊಗ್ಗ, ಉತ್ತರ ಕನ್ನಡ, ಕೊಡಗು ಭಾಗಗಳಲ್ಲಿ ಮಳೆಯ ಅರ್ಭಟ ಇಂದು ಕೂಡ ಮುಂದುವರಿದಿದೆ. ಮುಂದಿನ 2 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಲಭಿಸಿರುವುದರಿಂದ ಮುಂಜಾಗೃತಾ ಕ್ರಮವಾಗಿ ಮಲೆನಾಡಿನ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ, ಸಾಗರ, ಹೊಸನಗರ, ಶಿರಸಿ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮುನ್ನೆಚರಿಕಾ ಕ್ರಮವಾಗಿ 2 ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಮಳೆ ಮತ್ತು ಕೃಷ್ಣಾ ನದಿಯ ಅಬ್ಬರಕ್ಕೆ ಉತ್ತರ ಕರ್ನಾಟಕ ಭಾಗಶಃ ಮುಳುಗಡೆಯಾಗಿದೆ. ನಾರಾಯಣಪುರ ಜಲಾಶಯದಿಂದ 3 ಲಕ್ಷ ಕ್ಯೂಸೆಕ್‍ಗೂ ಹೆಚ್ಚು ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ನೂರಾರು ಹಳ್ಳಿಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
Advertisement
Advertisement
ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಬೆಳೆ ನೀರುಪಾಲಾಗಿದೆ. ನದಿ ಪಾತ್ರದ ಪ್ರದೇಶಗಳಲ್ಲಿ ಜನರನ್ನು ಸುಕ್ಷಿತ ಪ್ರದೇಶಗಳಿಗೆ ಶಿಫ್ಟ್ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಕೊಳ್ಳೂರು ಸೇತುವೆ ಮುಳುಗಡೆಯಾಗಿದ್ದು, ಯಾದಗಿರಿ-ಶಹಪುರ ನಡುವಿನ ಸಂಪರ್ಕ ಸ್ಥಗಿತವಾಗಿದೆ. ಹಲವೆಡೆ ಗಂಜಿ ಕೇಂದ್ರ ಆರಂಭಿಸಲಾಗಿದೆ. ಚಿಕ್ಕೋಡಿ ಬಳಿ ಪೆಟ್ರೋಲ್ ಪಂಪ್‍ಗೆ ನೀರು ನುಗ್ಗಿದೆ. ಅಥಣಿ, ಕಾಗವಾಡ ಮಧ್ಯೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಮಾಂಜರಿ ಬಳಿ ಕೃಷ್ಣೆ ನದಿಯಲ್ಲಿ ವಿದ್ಯುತ್ ಕಂಬ, ಟ್ರಾನ್ಸ್‍ಫಾರ್ಮರ್ ಮುಳುಗಿದೆ. ಖಾನಾಪುರ ತಾಲೂಕಲ್ಲಿ ರಸ್ತೆ ಕುಸಿದು, ಸಂಚಾರ ಅಡ್ಡಿಯಾಗಿದೆ. ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮುಳುಗಿದೆ. ಜಮಖಂಡಿ-ಜತ್ತ್ ನಡುವಿನ ರಸ್ತೆ ಜಲಾವೃತವಾಗಿದೆ.
Advertisement
ಮಡಿಕೇರಿ-ಚಿಕ್ಕಮಗಳೂರು ಭಾಗದಲ್ಲಿಯೂ ವರುಣ ಅಬ್ಬರಿಸುತ್ತಿದ್ದಾನೆ. ಈ ಬೆನ್ನಲ್ಲೇ ಭೂಕುಸಿತ ಶುರುವಾಗಿದೆ. ವಿರಾಜಪೇಟೆಯ ಮಾಕುಟ್ಟ ಬಳಿ ಕರ್ನಾಟಕ-ಕೇರಳ ಹೆದ್ದಾರಿಯಲ್ಲಿ ತಡೆಗೋಡೆ ಮತ್ತು ಹೆದ್ದಾರಿ ಕುಸಿದು, ಅಂತಾರಾಜ್ಯ ಹೆದ್ದಾರಿ ಬಂದ್ ಆಗಿದೆ. 3 ದಿನ ವಾಹನ ಸಂಚಾರ ಬಂದ್ ಆಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗಿದೆ. 1 ಅಡಿಯಷ್ಟು ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಳೆ ಮುಂದುವರಿದಲ್ಲಿ ಭಾಗಮಂಡಲ ತಲಕಾವೇರಿ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ. ವಿರಾಜಪೇಟೆ ತಾಲೂಕಿನ ಚೆಂಬೇಬೆಳ್ಳೂರಿನಲ್ಲಿ ಬೃಹತ್ ಗಾತ್ರದ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ. ಪೂವಯ್ಯ ಎಂಬವರ ಮನೆ ಮೇಲೆ ತಡೆಗೋಡೆ ಕುಸಿದಿದೆ. ಅದೃಷ್ಟವಶಾತ್ ಪ್ರಾಣಹಾನಿ ತಪ್ಪಿದೆ.
Advertisement
ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ಆಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರಿನ ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚಾರ್ಮಾಡಿಯಲ್ಲಿ ಅಲ್ಲಲ್ಲಿ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು, ಸಂಚಾರ ಏಕಮುಖವಾಗಿದೆ. ಆಲೇಖಾನ್ ಹೊರಟ್ಟಿ ರಸ್ತೆ ಬಳಿ ಗುಡ್ಡ ಕುಸಿತದಿಂದ ರಸ್ತೆ ಸಂಪೂರ್ಣ ಮುಚ್ಚಿ ಹೋಗಿದೆ. ಹೇಮಾವತಿ, ತುಂಗಾ-ಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ.