– ಆಯತಪ್ಪಿ ಚರಂಡಿಗೆ ಬಿದ್ದ ಶಾಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರು
ಕಲಬುರಗಿ/ಹಾವೇರಿ: ಜಿಲ್ಲೆಯ ಕೆಂತನಪಲ್ಲಿ ಗ್ರಾಮದಲ್ಲಿ ಸಿಡಿಲಿಗೆ ದಂಪತಿ ಬಲಿಯಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.
ಫರ್ಜಾನ ಬೇಗಂ (30), ಪತಿ ಖಾಜಾಮಿಯ್ಯಾ (35) ಮೃತ ದಂಪತಿಗಳಾಗಿದ್ದು, ಜಮೀನಿನಲ್ಲಿ ಕೆಲಸ ಮಾಡುವಾಗ ಘಟನೆ ನಡೆದಿದೆ. ಮಳೆಯಿಂದ ರಕ್ಷಣೆ ಪಡೆಯಲು ಮರದಡಿ 6 ಜನರು ಆಶ್ರಯ ಪಡೆದಿದ್ದರು. ಈ ವೇಳೆ ಸಿಡಿಲು ಬಡಿದಿದ್ದು, ಘಟನೆಯಲ್ಲಿ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕಲಬುರಗಿಯ ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿಗಳ ರಕ್ಷಣೆ: ಕಳೆದ ನಾಲ್ಕು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆರಾಯನ ಅರ್ಭಟ ಮುಂದುವರಿದ್ದು, ಗುಡುಗು ಸಹಿತ ಮಳೆಯಾಗುತ್ತಿದೆ. ಹಾವೇರಿಯಲ್ಲಿ ನಗರದಲ್ಲೂ ಧಾರಾಕಾರ ಮಳೆ ಹೆಚ್ಚಾಗಿದ್ದು, ಸಂಜೆ ಸುರಿಯುತ್ತಿದ್ದ ಧಾರಾಕಾರ ಮಳೆಯ ಸಂದರ್ಭದಲ್ಲಿ ಆಯತಪ್ಪಿ ತುಂಬಿ ಹರಿಯುತ್ತಿದ್ದ ಚರಂಡಿಗೆ ಬಿದ್ದ ಮೂವರು ಶಾಲಾ ವಿದ್ಯಾರ್ಥಿನಿಯರು ಅದೃಷ್ಟವಶಾತ್ ಪಾರಾದ ಘಟನೆ ನಡೆದಿದೆ. ಹಾವೇರಿ ನಗರದ ಹಾನಗಲ್ ರಸ್ತೆಯಲ್ಲಿರೋ ಸರಸ್ವತಿ ಚಿತ್ರಮಂದಿರದ ಕ್ರಾಸ್ ನ ರಸ್ತೆಯಲ್ಲಿ ವಿದ್ಯಾರ್ಥಿನಿಯರು ಚರಂಡಿಗೆ ಬಿದ್ದು ಒದ್ದಾಡ್ತಿರೋದನ್ನ ಗಮನಿಸಿದ ಸ್ಥಳೀಯರು, ತಕ್ಷಣವೇ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿನಿಯರನ್ನ ರಕ್ಷಿಸಿದ್ದಾರೆ. ಶಾಲೆ ಮುಗಿಸಿ ವಿದ್ಯಾರ್ಥಿನಿಯರು ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಪಾರಾದ ವಿದ್ಯಾರ್ಥಿನಿಯರು ನಿಟ್ಟುಸಿರುಬಿಟ್ಟಿದ್ದಾರೆ.