ಬೆಂಗಳೂರು: ರಾಜ್ಯಾದ್ಯಂತ ಮತ್ತೆ ಮಳೆಯ ಅಬ್ಬರ ಜೋರಾಗಿದೆ. ಉತ್ತರ ಕರ್ನಾಟಕದಲ್ಲಿ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ಮತ್ತೆ ಪ್ರವಾಹ ಭೀತಿ ಎದುರಾಗಿದೆ.
ಉತ್ತರ ಕರ್ನಾಟಕ, ಕಲಬುರಗಿಯ ಚಿಂಚೋಳಿ, ಸೇಡಂ ತಾಲೂಕುಗಳಲ್ಲಿ ಮಳೆ ಆರ್ಭಟ ಜೋರಾಗಿದ್ದು, ಚಿಂಚೋಳಿಯ ಚಂದ್ರಪಳ್ಳಿ ಜಲಾಶಯ ಭರ್ತಿ ಹಿನ್ನೆಲೆ ನೀರು ಬಿಡುಗಡೆ ಮಾಡಲಾಗಿದೆ. ಪಟಪಳ್ಳಿ, ಹಸರಗುಂಡಗಿ, ಗಡಿಕೇಶ್ವರ, ಯಂಪಳ್ಳಿ, ಕಂಚಿನಾಳ, ಶಾದಿಪೂರ್ ಗ್ರಾಮಗಳಿಗೆ ನುಗ್ಗಿದ ನೀರಿನಿಂದಾಗಿ ದೇಗಲಮಡಿ ಗ್ರಾಮದ 50ಕ್ಕೂ ಹೆಚ್ಚು ಮನೆಗಳು ಜಲಾವೃತ ಆಗಿದೆ. ಸೇಡಂನ ಮಳಖೇಡಾ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದನ್ನೂ ಓದಿ: ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಕಳ್ಳ
ಕಾಗಿಣಾ ನದಿ ಉಕ್ಕಿ ಹರಿಯುತ್ತಿದ್ದು, ಮಳಖೇಡದ ಉತ್ತಾರಾಧಿ ಮಠ ಸಂಪೂರ್ಣ ಜಲಾವೃತಗೊಂಡಿದೆ. ಮಠದ ಆವರಣದಲ್ಲಿ 4 ಅಡಿಗೂ ಹೆಚ್ಚು ನೀರು ತುಂಬಿದೆ. ಕಾಳಗಿ ತಾಲೂಕಿನ ಬೆಣ್ಣೆತೋರಾ ಜಲಾಶಯ ಭರ್ತಿಯಾಗಿದ್ದು, ಡ್ಯಾಮ್‍ನಿಂದ 20 ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಡ್ಯಾಂ ಕೆಳಭಾಗದ ಹಳೆ ಹೆಬ್ಬಾಳ ಗ್ರಾಮಕ್ಕೆ ನುಗ್ಗಿದ ನೀರು ಕಾಳಗಿಯ ನೀಲಕಂಠೇಶ್ವರ, ಸೇಡಂನ ಸಂಗಮೇಶ್ವರ ದೇಗುಲ ಜಲಾವೃತಗೊಂಡಿದೆ. ನೂರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಬೀದರ್‍ನಲ್ಲಿ ಸತತ ಒಂದು ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬೀದರ್-ಸಿರ್ಸಿ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೆಲ ಗ್ರಾಮಗಳ ಸೇತುವೆಗಳಿಗೆ ಹಾಕಿದ್ದ ಕಾಂಕ್ರಿಟ್ ಪೈಪ್‍ಗಳು ಕೊಚ್ಚಿ ಹೋಗಿವೆ. ನೀರಿನ ರಭಸಕ್ಕೆ ಬೃಹತ್ ಕಂದಕ ನಿರ್ಮಾಣವಾಗಿದೆ.ಇದನ್ನೂ ಓದಿ: ಸ್ಮಶಾನಕ್ಕೆ ದಾರಿ ಇಲ್ಲದೆ ಮೃತದೇಹವನ್ನ ಕೆಸರಲ್ಲೇ ಹೊತ್ತೊಯ್ದ ಗ್ರಾಮಸ್ಥರು
ಯಾದಗಿರಿ ಜಿಲ್ಲೆಯಲ್ಲೂ ವರುಣನ ಆರ್ಭಟ ಜೋರಾಗಿದ್ದು, ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮ ಜಲಾವೃತವಾಗಿದೆ. ತಗ್ಗು ಪ್ರದೇಶದ ನೂರಾರು ಮನೆಗಳಿಗೆ ನೀರು ನುಗ್ಗಿದೆ. ದವಸ-ಧಾನ್ಯಗಳು ನೀರಲ್ಲಿ ಕೊಚ್ಚಿ ಹೋಗುತ್ತಿದ್ದು, ನಾಯ್ಕಲ್ ಗ್ರಾಮದ ಜನಜೀವನ ಅಸ್ತವ್ಯಸ್ತವಾಗಿದೆ. ಯಾದಗಿರಿ ನಗರದ ಹೊರ ವಲಯದಲ್ಲಿ ದುರ್ಗಾ ನಗರದಲ್ಲಿಯೂ ಸಹ ಇದೇ ಪರಿಸ್ಥಿತಿ ಉಂಟಾಗಿದೆ. ಕೆರೆ ತುಂಬಿದ ಪ್ರತಿಬಾರಿಯೂ ಇದೇ ಪರಿಸ್ಥಿತಿ ಎದುರಾಗುತ್ತಿದ್ದು, ಶಾಶ್ವತ ಪರಿಹಾರಕ್ಕೆ ಸಂತ್ರಸ್ತರು ಆಗ್ರಹಿಸಿದ್ದಾರೆ. ವಿಜಯಪುರದಲ್ಲೂ ನಿನ್ನೆಯಿಂದ ಮಳೆ ಆಗುತ್ತಿದೆ. ನಿನ್ನೆಯಿಂದ ಬಿಟ್ಟೂ ಬಿಡದಂತೆ ಸುರಿಯುತ್ತಿದೆ. ಇಂದು ಕೂಡ ಮೋಡಕವಿದ ವಾತಾವರಣ ಮುಂದುವರಿದಿದ್ದು, ನಾಳೆವರೆಗೂ ಮಳೆ ಸುರಿಯುವ ಸಾಧ್ಯತೆ ಇದೆ. ಮಳೆಯಿಂದ ಜಿಲ್ಲೆಯ ರೈತ ವರ್ಗ ಸಂತೋಷಗೊಂಡಿದೆ. ಇದನ್ನೂ ಓದಿ: ಬೀದಿ ನಾಯಿಗಳ ಬಾಯಿಗೆ ಆ್ಯಸಿಡ್ ಹಾಕಿ ಕೊಲೆಗೈದರು
ಉತ್ತರದಲ್ಲಿ ಒಂದ್ಕಡೆ ಪ್ರವಾಹ, ಮತ್ತೊಂದು ಕಡೆ ಭೂಕಂಪ ಭೀತಿ ಎದುರಾಗಿದೆ. ಬಾಗಲಕೋಟೆ ಜಿಲ್ಲೆಯ ಕೆಲ ಭಾಗದಲ್ಲಿ ನಿನ್ನೆ ರಾತ್ರಿ ಭೂಕಂಪನ ಸಂಭವಿಸಿದೆ. ನಿನ್ನೆ ತಡರಾತ್ರಿ 11.50ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವಾಗಿದ್ದು, ಬಾಗಲಕೋಟೆ ವಿದ್ಯಾಗಿರಿಯ 22 ಕ್ರಾಸ್, ಶಾರದಾಳ, ಅಂಕಲಗಿ, ಹಿರೇಶೆಲ್ಲಿಕೇರಿ ಕ್ರಾಸ್‍ನಲ್ಲಿ ಭೂ ಕಂಪನ ಅನುಭವವಾಗಿದೆ. ಶೆಲ್ಲಿಕೇರಿ ಕ್ರಾಸ್‍ನಲ್ಲಿ ಮನೆಯಿಂದ ಕೆಲವರು ಓಡಿ ಹೊರ ಬಂದಿದ್ದಾರೆ. ಬಾಗಲಕೋಟೆ ಜೊತೆಗೆ ವಿಜಯಪುರ ನಗರದಲ್ಲೂ ಭೂಕಂಪದ ಅನುಭವಾಗಿದೆ. ವಿಜಯಪುರ ನಗರದ ವಿವಿಧ ಭಾಗಗಳಲ್ಲಿ ಭೂಮಿ ನಡುಗಿದ ಬಗ್ಗೆ ವರದಿಯಾಗಿದೆ. ನಿನ್ನೆ ತಡರಾತ್ರಿ 11.48 ಭೂಕಂಪನದ ಅನುಭವವಾಗಿದ್ದು, 2 ಬಾರಿ ಭೂಮಿ ಕಂಪಿಸಿದೆ ಎಂದು ಜನ ತಿಳಿಸಿದ್ದಾರೆ. ರಿಕ್ಟರ್ ಮಾಪನದಲ್ಲಿ 3.9ರಷ್ಟು ತೀವ್ರತೆ ದಾಖಲಾಗಿದೆ.