ಚಿಕ್ಕಮಗಳೂರು: ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಚಿಕ್ಕಮಗಳೂರಿನ ಕಳಸ ಬಳಿಯ ಕಾರ್ಗದ್ದೆ ಗ್ರಾಮದಲ್ಲಿ ರಸ್ತೆಗೆ ಗುಡ್ಡ ಕುಸಿತವಾಗಿದ್ದು, ಪರಿಣಾಮ ಕಳಸ – ಮಂಗಳೂರು ಸಂಚಾರ ಬಂದ್ ಆಗಿದೆ.
ಕಳೆದ 2 ದಿನಗಳ ಹಿಂದೆಯಷ್ಟೇ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಸಂಚಾರವನ್ನು ಸ್ಥಗಿತ ಮಾಡಲಾಗಿತ್ತು. ಗುರುವಾರದ ಮಧ್ಯ ರಾತ್ರಿವರೆಗೂ ರಸ್ತೆ ಮೇಲೆ ಬಿದಿದ್ದ ಮಣ್ಣಿನ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಈ ಕಾರ್ಯ ಇನ್ನು ಪೂರ್ಣಗೊಳ್ಳದ ಕಾರಣ ಸಂಚಾರವನ್ನು ಇಂದು ಸ್ಥಗಿತ ಮಾಡಲಾಗಿದೆ. ಈಗಾಗಲೇ ಚಾರ್ಮಾಡಿ ಘಾಟ್ ಬಂದ್ ಆಗಿರುವುದರಿಂದ ವಾಹನ ಸವಾರರು ಸಮಸ್ಯೆ ಎದುರಿಸಿದ್ದರು. ಸದ್ಯ ಅನ್ಯ ಮಾರ್ಗವಾಗಿ ಬಳಕೆಯಾಗುತ್ತಿದ್ದ ಕಳಸ ಮಾರ್ಗವೂ ಬಂದ್ ಆಗಿದೆ.
ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 73 ರ ಚಾರ್ಮಾಡಿ ಘಾಟ್ ಭಾಗದಲ್ಲಿ ಸಂಭವಿಸಿದ ಗುಡ್ಡ ಕುಸಿತ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ತೆರವು ಕಾರ್ಯಾಚರಣೆ ಪೂರ್ಣಗೊಳ್ಳದ ಕಾರಣ ರಸ್ತೆ ಸಂಚಾರ ಸ್ಥಗಿತವನ್ನು ಆಗಸ್ಟ್ 9ರ ಮಧ್ಯರಾತ್ರಿ 12 ಗಂಟೆ ತನಕ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ವರುಣನ ರುದ್ರ ನರ್ತನ ಮುಂದುವರಿದಿರುವುದರಿಂದ ಕಾಫಿನಾಡಲ್ಲಿ ಅನ್ನಪೂರ್ಣೇಶ್ವರಿ ದರ್ಶನ ಅಸಾಧ್ಯವಾಗಿದೆ. ಕಳೆದ ಎರಡು ದಿನಗಳಿಂದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಕುದುರೆಮುಖ, ಕಳಸ, ಸಂಸೆ ಭಾಗದಲ್ಲಿ ಇಂದು ಸಹ ಮಳೆ ಮುಂದುವರಿದಿದೆ. ಭದ್ರಾ ನದಿ ಅಪಾಯ ಮಟ್ಟ ಮೀತಿ ಹರಿಯುತ್ತಿರುವುದರಿಂದ ಹೊರನಾಡಿನ ಎರಡೂ ಸಂಚಾರಿ ಮಾರ್ಗಗಳು ಬಂದ್ ಆಗಿದೆ.