ಗದಗ: ಜಿಲ್ಲೆಯಾದ್ಯಂತ ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನೀರಿನ ರಭಸಕ್ಕೆ ಕೆಎಸ್‍ಆರ್‍ಟಿಸಿ ಬಸ್ ಹಳ್ಳಕ್ಕೆ ಉರುಳಿದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ದೊಡ್ಡೂರ ಗ್ರಾಮದ ಬಳಿ ನಡೆದಿದೆ.
ತುಂಬಿ ಹರಿಯುತ್ತಿರುವ ದೊಡ್ಡೂರ ಹಳ್ಳದಲ್ಲಿ ಚಾಲಕ ಬಸ್ ಚಲಾಯಿಸಿದ್ದಾರೆ. ಸ್ಥಳೀಯರು ಬೇಡವೆಂದರೂ ಚಾಲಕ ಹಳ್ಳದಲ್ಲಿ ಬಸ್ ಚಲಾಯಿಸಿದ ಪರಿಣಾಮ ನೀರಿನ ರಭಸಕ್ಕೆ ಬಸ್ ಹಳ್ಳಕ್ಕೆ ಉರುಳಿದೆ. ಬಸ್ ಹಳ್ಳದಲ್ಲಿ ಬಿದ್ದಾಗ ನಮ್ಮನ್ನು ಬದುಕಿಸಿ ಅಂತ ಪ್ರಯಾಣಿಕರ ಕೂಗಾಟ, ಚಿರಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ನಂತರ ದೊಡ್ಡೂರ ಗ್ರಾಮಸ್ಥರು ಹಗ್ಗದ ಸಹಾಯದಿಂದ ಚಾಲಕ ಸೇರಿದಂತೆ ಐದು ಜನರನ್ನು ರಕ್ಷಿಸಿದ್ದಾರೆ.
ಲಕ್ಷ್ಮೇಶ್ವರ ದಿಂದ ಯಲ್ಲಾಪುರ ಕ್ಕೆ ಹೊರಟಿದ್ದ ಕೆಎ26ಎಫ್81 ನಂಬರಿನ ಬಸ್ ಇದಾಗಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.