– ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್
ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರಿನ ಅಬ್ಬರ ಜೋರಾಗಿದೆ. ಕಳೆದೊಂದು ವಾರದಿಂದ ರಾಜ್ಯದ ಬಹುತೇಕ ಕಡೆ ವರುಣಾಬ್ಬರ ಜೋರಾಗಿದ್ದು, ಈ ನಡುವೆ ಮುಂದಿನ ನಾಲ್ಕೈದು ದಿನ ಮಳೆ ಅಬ್ಬರಿಸೋ ಬಗ್ಗೆ ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪೂರ್ವ ಮುಂಗಾರಿನ ಅಬ್ಬರ ಜೋರಾಗಿದೆ. ಕಳೆದ ಎಂಟತ್ತು ದಿನಗಳಿಂದ ಅಬ್ಬರಿಸುತ್ತಿರೋ ಮಳೆರಾಯ, ರಾಜ್ಯದಾದ್ಯಂತ ಮುಂದಿನ ನಾಲ್ಕೈದು ದಿನ ಮತ್ತಷ್ಟು ಅಬ್ಬರಿಸುವ ಸಾಧ್ಯತೆಯಿದೆ. ರಾಜ್ಯದ ಅನೇಕ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ ಕೂಡ ಇದ್ದು, ಹವಾಮಾನ ಇಲಾಖೆ ಅಲರ್ಟ್ ಘೋಷಿಸಿದೆ.
Advertisement
Advertisement
ಮೇಲ್ಮೈ ಸುಳಿಗಾಳಿ, ಟ್ರಫ್ ಹಾಗೂ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಇಂದಿನಿಂದ ಐದು ದಿನ ರಾಜ್ಯದ 17 ಜಿಲ್ಲೆಗಳಿಗೆ ಅಲರ್ಟ್ ಘೋಷಣೆ ಮಾಡಲಾಗಿದೆ. ಇದರೊಂದಿಗೆ ಮುಂಗಾರು ಆರಂಭಕ್ಕೂ ಮುನ್ನವೇ ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು, ಹಾಸನ, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ. ಜೊತೆಗೆ ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
Advertisement
Advertisement
ಇಂದಿನಿಂದ ಮೂರು ದಿನ ಕರಾವಳಿ ಎಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ 5 ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಉತ್ತರ ಕರ್ನಾಟಕದ ಭಾಗಗಳಿಗೆ ಸಾಧಾರಣ ಮಳೆ ಮುನ್ಸೂಚನೆ ನೀಡಲಾಗಿದೆ. ಜೊತೆಗೆ ಬಹುತೇಕ ಕಡೆ ಮಳೆ ಜೊತೆಗೆ ಬಿರುಗಾಳಿ ಸಹಿತ ಮಳೆ, ಗುಡುಗು ಮಿಂಚಿನ ಎಚ್ಚರಿಕೆ ಕೂಡ ನೀಡಲಾಗಿದೆ. ಬೆಂಗಳೂರಿನಲ್ಲೂ ಮಳೆಯ ಅಬ್ಬರ ಮುಂದುವರೆಯುವ ಸಾಧ್ಯತೆ ಇದ್ದು, ಮುಂದಿನ ಒಂದು ವಾರ ನಗರದ ಹಲವೆಡೆ ಭಾರಿ ಮಳೆಯ ನಿರೀಕ್ಷೆ ಮಾಡಲಾಗಿದೆ. ಹಲವೆಡೆ ಭಾರೀ ಗುಡುಗು ಸಹಿತ ಮಳೆಯ ಅಬ್ಬರ ಎಚ್ಚರಿಕೆಯನ್ನ ಕೂಡ ಹವಾಮಾನ ಇಲಾಖೆ ನೀಡಿದೆ.
ಒಟ್ಟಾರೆ ಬೇಸಿಗೆ ಬೇಗೆಗೆ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಪೂರ್ವ ಮುಂಗಾರಿನ ಹಂಗಾಮ ಜೋರಾಗಿದ್ದು, ಮಳೆ ಕಾಣದೇ ಒಣಗಿದ್ದ ಭೂಮಿ ತಂಪಾಗುತ್ತಿದ್ದು, ರೈತಾಪಿ ವರ್ಗ ಕೂಡ ನಿಟ್ಟುಸಿರು ಬಿಟ್ಟಿದೆ.