– ಅವಧಿ ಪೂರ್ವದಲ್ಲಿ ಮೀನುಗಾರಿಕೆ, ಜಲಸಾಹಸ ಕ್ರೀಡೆ ರದ್ದು
ಕಾರವಾರ: ಉತ್ತರ ಕನ್ನಡ (Uttara Kannada Rain) ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಮೀನುಗಾರಿಕೆ ಪೂರ್ಣ ಬಂದ್ ಆಗಿದೆ. ಜಲಸಾಹಸ ಕ್ರೀಡೆಗಳಿಗೆ ಸಹ ನಿರ್ಬಂಧ ಹೇರಲಾಗಿದೆ.
ಜಿಲ್ಲೆಯಲ್ಲಿ ಅಬ್ಬರದ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರೆಡ್ ಅಲರ್ಟ್ ನೀಡಲಾಗಿದೆ. ಭಾರೀ ಮಳೆಗೆ ಕುಮಟಾ ತಾಲೂಕಿನ ಸಿದ್ದಾಪುರ-ಕುಮಟಾ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಯಿತು. ಅಬ್ಬರದ ಮಳೆಯಿಂದಾಗಿ ಸಮುದ್ರ ಭಾಗದಲ್ಲಿ ಹೆಚ್ಚಿನ ಗಾಳಿ ಬೀಸುತ್ತಿದ್ದು, ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಇತ್ತ ಜಿಲ್ಲೆಯ ಜಲಸಾಹಸ ಕ್ರೀಡೆಗೆ ಇಂದಿನಿಂದ ನಿಷೇಧ ವಿಧಿಸಲಾಗಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ – ಮನೆ ಕುಸಿತ
ಅರಬ್ಬೀ ಸಮುದ್ರದಲ್ಲಿ 45 ರಿಂದ 55 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದರಿಂದಾಗಿ ಮೀನುಗಾರಿಕೆಗೆ ತೆರಳಿದ್ದ ರಾಜ್ಯ, ಹೊರ ರಾಜ್ಯದ ಬೋಟುಗಳು ಜಿಲ್ಲೆಯ ಬಂದರಿನಲ್ಲಿ ಆಶ್ರಯ ಪಡೆದಿದೆ. ಸರ್ವ ಋತು ಬಂದರು ಎಂದೇ ಕರೆಸಿಕೊಳ್ಳುವ ಕಾರವಾರದ ಬೈತಕೋಲ್ ಬಂದರಿನಲ್ಲಿ ಕೇರಳ, ತಮಿಳುನಾಡಿನ ನೂರಾರು ಬೋಟುಗಳು ಲಂಗುರು ಹಾಕಿವೆ. ಜೂನ್ 1 ರಿಂದು ಎರಡು ತಿಂಗಳ ಕಾಲ ಮೀನುಗಾರಿಕೆ ಬಂದ್ ಮಾಡಲಾಗುತ್ತದೆ. ಆದರೆ, ಅವಧಿ ಮುಂಚೆಯೇ ಮೀನುಗಾರಿಕೆಯನ್ನು ಬಂದ್ ಮಾಡಲಾಗಿದೆ.
ಕಳೆದ ವರ್ಷ ಭೂಕುಸಿತ, ಸಾವು-ನೋವು ನೋಡಿದ್ದ ಜಿಲ್ಲೆಯಲ್ಲಿ ಪ್ರಾರಂಭದಲ್ಲೇ ಅಬ್ಬರದ ಮಳೆ ಭಯ ಹುಟ್ಟಿಸುವಂತೆ ಮಾಡಿದೆ. ಮಳೆಯ ಆರ್ಭಟ ಕಂಡು ಜನರು ಭೀತಿಯಲ್ಲೇ ದಿನದೂಡುವಂತಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಭಾರೀ ಮಳೆ – ಅಂಗಡಿಗಳಿಗೆ ನುಗ್ಗಿತು ಕೆಸರು ನೀರು