ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ. ಕೊಡಗಿನಲ್ಲಿ ಮಳೆ ಅಬ್ಬರಕ್ಕೆ ಹಲವಾರು ಅವಾಂತರಗಳು ಸೃಷ್ಟಿಯಾಗಿವೆ. ಕೊಡಗು ಜಿಲ್ಲೆಯಲ್ಲಿ ಮಳೆ ಆಗುತ್ತಿದೆ. ಮಡಿಕೇರಿ, ವಿರಾಜಪೇಟೆಯಲ್ಲಿ ಮಳೆ ಆಗುತ್ತಿದ್ದು, ಭಾಗಮಂಡಲದ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಪ್ರತಾಪ ಜೋರಾಗಿದೆ. ಭಟ್ಕಳದಲ್ಲಿ ರಸ್ತೆ ಅಂಗಡಿಗಳಿಗೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ದರು. ಇದರಿಂದ ಉಡುಪಿ- ಭಟ್ಕಳ ಭಾಗದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದಲ್ಲದೇ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಹಾವೇರಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಬ್ಯಾಡಗಿ, ರಾಣೇಬೆನ್ನೂರು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.
Advertisement
Advertisement
ಆರೆಂಜ್ ಅಲರ್ಟ್ ನಲ್ಲಿರುವ ಕೊಡಗಿನ ವಿವಿಧೆಡೆ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ವಿರಾಜಪೇಟೆ ತಾಲೂಕಿನಲ್ಲಿ ಸುರಿದ ಜಿಟಿ ಜಿಟಿ ಮಳೆಗೆ ಮಲೆತಿರಕೆ ಬೆಟ್ಟದ ಸಮೀಪ ಇರುವ ಎರಡು ಮನೆಗಳ ಮೇಲೆ ಮಣ್ಣು ಕುಸಿದಿದ್ದು, ನಿವಾಸಿಗಳನ್ನು ಸಮುದಾಯ ಭವನಕ್ಕೆ ಸ್ಥಳಾಂತರಿಸಿದ್ದಾರೆ.
Advertisement
ನಾಪೋಕ್ಲು ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ರಸ್ತೆ ಮುಳುಗಡೆಯಾಗುವ ಭೀತಿ ಹೆಚ್ಚಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಇದೇ ರೀತಿ ಮೂರು ದಿನ ನಿರಂತರ ಮಳೆಯಾದರೆ ತ್ರಿವೇಣಿ ಸಂಗಮ ಮುಳುಗಡೆಯಾಗುವ ಸಾಧ್ಯತೆಯಿದೆ.
Advertisement
ಉಡುಪಿಯಲ್ಲಿ ಕಳೆದ ಮೂರು ದಿನಗಳಲ್ಲಿ 300 ಮಿಲಿಮೀಟರ್ ನಷ್ಟು ಮಳೆಯಾಗಿದೆ. ಮೊದಲೆರಡು ದಿನ 100 ಮಿಲಿ ಮೀಟರ್ ಮಳೆ ಬಿದ್ದಿದ್ದು, ಮೂರನೇ ದಿನವೂ ಚೆನ್ನಾಗಿ ಮಳೆಯಾಗಿದೆ. ಜಿಲ್ಲೆಯ ಕಾರ್ಕಳ ತಾಲೂಕಲ್ಲಿ 110 ಮಿಲಿ ಮೀಟರ್, ಕುಂದಾಪುರದಲ್ಲಿ 102 ಮಿಲಿಮೀಟರ್, ಉಡುಪಿಯಲ್ಲಿ 88 ಮಿಲಿಮೀಟರ್ ಮಳೆಯಾಗಿದೆ.
ಕೇರಳದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಕಣ್ಮರೆಯಾಗಿದ್ದಾರೆ. ಬಿಹಾರದಲ್ಲಿ ಪ್ರವಾಹದಿಂದ 12 ಲಕ್ಷ ಮಂದಿ ಸಂಕಷ್ಟಕ್ಕೀಡಾಗಿದ್ದು, ಸಾವಿನ ಸಂಖ್ಯೆ 102ಕ್ಕೆ ಏರಿದೆ. ಅಸ್ಸಾಂನಲ್ಲಿ 38 ಲಕ್ಷ ಜನ ಪ್ರವಾಹಪೀಡಿತರಾಗಿದ್ದು, 64 ಮಂದಿ ಬಲಿಯಾಗಿದ್ದಾರೆ.