ಉಡುಪಿಯಲ್ಲಿ ಭಾರೀ ಮಳೆ- ಬ್ರಹ್ಮಾವರದಲ್ಲಿ ರಸ್ತೆ ತುಂಬೆಲ್ಲಾ ನೀರು

Public TV
1 Min Read
UDP RAIN

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಭಾರೀ ಮಳೆಯಾಗಿದೆ. ಶುಕ್ರವಾರ ಮುಂಜಾನೆಯಿಂದ ಆರಂಭವಾದ ಮಳೆ ಸಂಜೆಯಾಗುತ್ತಿದ್ದಂತೆ ಬಿರುಸುಗೊಂಡಿದೆ. ಬೆಳಗ್ಗೆ ಏಳು ಗಂಟೆ ಸುಮಾರಿಗೆ ತುಂತುರು ಮಳೆ ಶುರುವಾಗಿದೆ. ಸಂಜೆಯಾಗುತ್ತಿದ್ದಂತೆ ಭಾರೀ ಮಳೆಯಾಗಿದೆ.

ಮುಂಗಾರು ಮಳೆ ಜೂನ್ 1ಕ್ಕೆ ಕರಾವಳಿಗೆ ಎಂಟ್ರಿ ಕೊಟ್ಟಂತೆ ಭಾಸವಾಗಿತ್ತು. ಆದ್ರೆ ಮುಂಗಾರು ಅಬ್ಬರ ಒಂದೇ ದಿನಕ್ಕೆ ಮುಗಿದಿತ್ತು. ಶುಕ್ರವಾರದಂದು ಉಡುಪಿಯಲ್ಲಿ ಮತ್ತೆ ಮಳೆ ಶುರುವಾಗಿದೆ. ಜಿಲ್ಲೆಯಾದ್ಯಂತ ಮಳೆಗಾಲದ ವಾತಾವರಣದಂತೆ ಭಾಸವಾಗುತ್ತಿತ್ತು. ಉಡುಪಿ- ಕುಂದಾಪುರ ಮತ್ತು ಕಾರ್ಕಳದಲ್ಲಿ ಕೂಡಾ ಭಾರೀ ಮಳೆಯಾಗಿದೆ.

UDP RAIN 2 1

ಬತ್ತಿ ಹೋಗಿರುವ ಸ್ವರ್ಣಾ ನದಿಯಲ್ಲಿ ನೀರು ತುಂಬುವಂತಹ ಬಿರುಸಿನ ಮಳೆ ಮಾತ್ರ ಇದಲ್ಲ. ನಿರಂತರ ಎರಡು ದಿನ ಭಾರೀ ಮಳೆಯಾದರೆ ಮಾತ್ರ ಉಡುಪಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬಹುದು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಗಾರು ವಾರಗಳ ಕಾಲ ಮುಂದೆ ಹೋಗಿದೆ. ಹೀಗಾಗಿ ಜೂನ್ ತಿಂಗಳ ಅಬ್ಬರದ ಮುಂಗಾರು ಕಾಣಿಸುತ್ತಿಲ್ಲ.

ಉಡುಪಿ ಜಿಲ್ಲೆಯ ಬ್ರಹ್ಮಾವರ- ಮಟಪಾಡಿ- ಕುಂಜಾಲು ಭಾಗದಲ್ಲೂ ಕೂಡ ಭಾರೀ ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರ ಸರ್ವಿಸ್ ರಸ್ತೆಯ ಮೇಲೆ ಮಳೆ ನೀರು ನುಗ್ಗಿದೆ. ಇದೇ ರೀತಿ ಮಳೆ ಆದ್ರೆ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ರೈತರು ಶುರು ಮಾಡುತ್ತಾರೆ. ಒಟ್ಟಿನಲ್ಲಿ ಬೆಳಗ್ಗೆ ಮಳೆ, ಮಧ್ಯಾಹ್ನ ಬಿಸಿಲು, ಸಂಜೆ ಮತ್ತೆ ಮಳೆಯಾಗುತ್ತಿದ್ದು ಮಳೆ ಕಣ್ಣಾಮುಚ್ಚಾಲೆ ಆಡಿದೆ.

UDP RAIN 1 1

Share This Article