ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಆರ್ಭಟ- ರಸ್ತೆಗಳು ಜಲಮಯ, ಸಂಚಾರ ಅಯೋಮಯ

Public TV
2 Min Read
RAIN 1

ಬೆಂಗಳೂರು: ಮುಂಗಾರು ಮಳೆ (Mansoon Rain) ವಿಳಂಬದಿಂದ ಕಂಗೆಟ್ಟ ಕರುನಾಡಿನ ಹಲವು ಜಿಲ್ಲೆಗಳಲ್ಲಿ ಮೂರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಬಹುತೇಕ ಹಳ್ಳ ಕೊಳ್ಳ ಭರ್ತಿಯಾಗಿ ನದಿಯಲ್ಲಿ ಸಹ ನೀರಿನ ಹರಿವು ಹೆಚ್ಚಾಗಿದೆ. ಈ ಮೂಲಕ ಬರದ ಭೀತಿಯಲ್ಲಿದ್ದ ರಾಜ್ಯದ ಜನ ಕೊಂಚ ನಿರಾಳರಾಗಿದ್ದಾರೆ.

RAIN 2

ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಲೇಟ್ ಆದ್ರೂ ಲೇಟೆಸ್ಟ್ ಆಗಿ ಎಂಟ್ರಿಕೊಟ್ಟಿರೋ ಮಳೆರಾಯ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿ ಬೊಬ್ಬರಿಯುತ್ತಿದ್ದಾನೆ. ಉತ್ತರ ಕರ್ನಾಟಕದಲ್ಲಂತೂ ಮಳೆರಾಯ ಹತ್ತಾರು ಅವಾಂತರಗಳನ್ನು ಸೃಷ್ಟಿಸಿ ಹೋಗ್ತಿದ್ದಾನೆ. ಗಿರಿಗಳ ನಗರಿ ಯಾದಗಿರಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಬೀಡು ಬಿಟ್ಟಿದ್ದಾನೆ. ಇದರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ಹೊಕ್ಕಿದೆ.

RAIN

ವರುಣಾರ್ಭಟಕ್ಕೆ ಬೆಳಗಾವಿಯಲ್ಲಿ 16 ಕೆಳಹಂತದ ಸೇತುವೆಗಳು ಮುಳುಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸೇತುವೆಗಳು ಮುಳುಗಿರೋ ಕಾರಣ ಗ್ರಾಮಗಳ ಮಧ್ಯೆಯೇ ಸಂಪರ್ಕ ಕಟ್ ಆಗಿದೆ. ಇದನ್ನೂ ಓದಿ: ಭಜರಂಗದಳದ ಮೂವರಿಗೆ ಗಡಿಪಾರು ನೋಟಿಸ್- ಸಿಡಿದೆದ್ದ ಹಿಂದೂ ಸಂಘಟನೆಗಳು

ಕಲಬುರಗಿಯಲ್ಲಿ ಭಾರೀ ಮಳೆಯಾಗಿದೆ. ಮುಲ್ಲಾಮಾರಿ ಡ್ಯಾಂ ಭರ್ತಿಯಾಗಿದೆ. ಡ್ಯಾಂ ಕೆಳಭಾಗದ ಚಿಮ್ಮನಚೂಡ, ತಾಜಲಾಪೂರ, ಕನಕಪೂರ, ದರ್ಗಾಪಲ್ಲಿ ಸೇತುವೆಗಳು ಜಲಾವೃತಗೊಂಡಿದೆ. ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮಳಖೇಡದಲ್ಲಿ ಜಯತೀರ್ಥರ ಮೂಲ ಬೃಂದಾವನಕ್ಕೂ ಮಳೆ ನೀರು ಆವರಿಸಿದೆ. ರಸ್ತೆ ಮೇಲೆ ನದಿಯಂತೆ ನೀರು ಹರೀತಿದೆ. ಹಳ್ಳ-ಕೊಳ್ಳ ಉಕ್ಕಿ ಹರೀತಿದೆ. ಚಿತ್ತಾಪುರದಲ್ಲಿ ಹಲವು ಮನೆಗಳ ಗೋಡೆ ಕುಸಿದಿದೆ.

ಬೀದರ್ ತಾಲೂಕಿನ ಸಿಂದೋಲ್ ಸೇತುವೆ ಮುಳುಗಡೆಯಾಗಿದೆ. ಭಾಲ್ಕಿ ತಾಲೂಕಿನ ಖಾನಾಪುರ ಬಳಿಯ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನದಲ್ಲಿ ಜಲಪಾತ ಸೃಷ್ಟಿಯಾಗಿದೆ. ಬಿರುಗಾಳಿ ಮಳೆಗೆ ಚಲಿಸುತ್ತಿದ್ದ ಆಟೋ ಮೇಲೆ ಮರ ಉರುಳಿ ಬಿದ್ದಿದೆ. ಘಟನೆಯಲ್ಲಿ ಆಟೋ ಚಾಲಕನ ತಲೆಗೆ ಗಂಭೀರ ಗಾಯವಾಗಿದೆ. ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಸುಂಡೇಕೆರೆ ಗ್ರಾಮದ ಬಳಿ ಘಟನೆ ನಡೆದಿದೆ.

ಒಟ್ಟಾರೆ ರಾಜ್ಯದಲ್ಲಿ ಮುಂಗಾರು ಮಳೇ ಅಬ್ಬರಿಸುತ್ತಿದೆ. ಬರದ ಛಾಯೆ ನಿಧಾನವಾಗಿ ದೂರವಾಗ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Web Stories

Share This Article