ಬೆಂಗಳೂರು: ರಾಜ್ಯದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿವರೆಗೂ ಜಿಟಿ ಜಿಟಿ ಮಳೆ ಸುರಿದಿದೆ. ಭಾನುವಾರ ಸಂಜೆ ಪ್ರಾರಂಭವಾದ ಮಳೆ ಬೆಳಗಿನ ಜಾವದವರೆಗೂ ಮುಂದುವರೆದಿತ್ತು.
Advertisement
ಮಳೆಯಿಂದ ನಗರದ ಹಲವೆಡೆ ಮರಗಳು ನೆಲಕ್ಕುರುಳಿದ್ದು, ಗಾಂಧಿನಗರ, ಹಲಸೂರು ರೋಡ್, ಕಸ್ತೂರ್ ಬಾ ರಸ್ತೆಯಲ್ಲಿ ತಲಾ ಒಂದೊಂದು ಮರ ಬಿದ್ದಿವೆ. ಧಾರಾಕಾರ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
Advertisement
ನೂತನ ಮೇಯರ್ ಪರಿಶೀಲನೆ: ಜಯನಗರ, ಕೆ.ಆರ್.ರಸ್ತೆ, ಬನಶಂಕರಿ, ಇಂದಿರಾನಗರ, ಕನಕಪುರ ರೋಡ್ ಸೇರಿದಂತೆ ಹಲವೆಡೆ ನೂತನ ಮೇಯರ್ ಸಂಪತ್‍ರಾಜ್ ಭೇಟಿ ನೀಡಿ ತಗ್ಗು ಪ್ರದೇಶಗಳ ಪರಿಶೀಲನೆ ಮಾಡಿದರು. ಈ ವೇಳೆ ಮಾತಾನಾಡಿದ ಅವರು ಈಗಾಗಲೇ ಆರಂಭ ಮಾಡಲಾಗಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಿ ಅಂತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
Advertisement
Advertisement
ಇನ್ನುಳಿದಂತೆ ಇಂದಿರಾನಗರದ ಬಳಿ ಮರ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸಂಪತ್‍ರಾಜ್ ಈ ಬಗ್ಗೆ ಪರಿಶೀಲನೆ ನಡೆಸಿದರು. ಅಷ್ಟೇ ಅಲ್ಲದೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಕಂಟ್ರೋಲ್ ರೂಂನಲ್ಲಿ ತಾವೇ ಖುದ್ದು ಕುಳಿತುಕೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಬೆಂಗಳೂರು ಹೊರವಲಯ ಆನೇಕಲ್ ಸುತ್ತಮುತ್ತಲೂ ಗುಡುಗು ಮಿಂಚು ಸಹಿತ ಮಳೆ ಬಿದ್ದಿದ್ದು, ಪಾದಚಾರಿಗಳು ಹಾಗೂ ಬೈಕ್ ಸವಾರರು ಮನೆ ತಲುಪಲು ಪರದಾಡಿದರು. ಸತತ ಮಳೆಯ ಪರಿಣಾಮದಿಂದ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿವೆ.
ರಾಮನಗರ, ತುಮಕೂರಿನಲ್ಲೂ ಭಾನುವಾರ ಸಂಜೆಯಿಂದ ಮಳೆ ಭಾರೀ ಮಳೆಯಾಗಿದ್ದು, ರಾಮನಗರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಹಾಸನದಲ್ಲೂ ಭರ್ಜರಿ ಮಳೆಯಾಗಿದೆ. ಜಿಲ್ಲೆಯ ಅರಸೀಕೆರೆ ತಾಲೂಕು ಜಾವಗಲ್ ಹೋಬಳಿ ದೊಡ್ಡಗಟ್ಟ ಗ್ರಾಮದಲ್ಲಿ ಓರ್ವ ಮಹಿಳೆ ಸಿಡಿಲಿಗೆ ಬಲಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲಾದ್ಯಾಂತ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಶಿರಸಿ ಭಾಗದಲ್ಲಿ ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ. ಚಿತ್ರದುರ್ಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ. ಚಿತ್ರದುರ್ಗ-ಚಳ್ಳಕೆರೆ ಮಾರ್ಗ ಮಧ್ಯದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ, 1 ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಆಗಿತ್ತು.
ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಅಪಾರ ಪ್ರಮಾಣ ಬೆಳೆ ನಾಶವಾಗಿದೆ.