– ಚಿಕ್ಕಮಕ್ಕಳಿಂದ ವಯೋವೃದ್ಧರವರೆಗೂ ಹರಡುತ್ತಿರುವ ಜ್ವರ
ರಾಯಚೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬಿಸಿಲನಾಡು ರಾಯಚೂರು (Raichuru) ಇದೀಗ ಮಲೆನಾಡಂತಾಗಿದೆ. ಇದರಿಂದ ವೈರಲ್ ಫೀವರ್ ಹೆಚ್ಚಾಗಿದ್ದು, ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಜ್ವರ ವಿಪರೀತವಾಗಿ ಹರಡಿಕೊಳ್ಳುತ್ತಿದೆ.
ಹೌದು, ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ನಾನಾ ಸಮಸ್ಯೆಗಳನ್ನ ಉಂಟು ಮಾಡುತ್ತಿದೆ. ಒಂದೆಡೆ ರೈತರು ಬೆಳೆ ಉಳಿಸಿಕೊಳ್ಳಲು ಒದ್ದಾಡುತ್ತಿದ್ದರೆ, ಇನ್ನೊಂದೆಡೆ ಜನ ವೈರಲ್ ಫೀವರ್‌ಗೆ ತತ್ತರಿಸುತ್ತಿದ್ದಾರೆ. ಪ್ರತೀ ವರ್ಷಕ್ಕಿಂತ ಈ ಬಾರಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.ಇದನ್ನೂ ಓದಿ: ಮುಂದಿನ ಮೂರು ಗಂಟೆ ಬೆಂಗಳೂರಿಗೆ ಮಳೆ ಅಲರ್ಟ್
ವಾತಾವರಣದಲ್ಲಿನ ಬದಲಾವಣೆಯಿಂದ ಬಿಸಿಲನಾಡು ಮಲೆನಾಡಾಗಿದ್ದು, ಜನರಲ್ಲಿ ವೈರಲ್ ಫೀವರ್ ಹೆಚ್ಚಾಗಿದೆ. ಇದರಿಂದ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಪ್ರತಿ ವರ್ಷವೂ ಮಳೆಗಾಲದ ಬಳಿಕ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದ್ರೆ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ನಿರಂತರ ಮಳೆ ಬರುತ್ತಿರುವುದರಿಂದ ವಾತಾವರಣ ತಂಪಾಗಿದೆ. ವೈರಾಣು ವೃದ್ಧಿ ಪ್ರಮಾಣ ಹೆಚ್ಚಾಗುವುದರಿಂದ ವೈರಲ್ ಫೀವರ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.
ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಮಕ್ಕಳ ಆಸ್ಪತ್ರೆಗಳಲ್ಲಿ ವೈರಲ್ ಫೀವರ್ ಪ್ರಕರಣಗಳೇ ಜಾಸ್ತಿಯಾಗಿವೆ. ಉಸಿರಾಟ ಸಮಸ್ಯೆ, ಕೆಮ್ಮು, ನೆಗಡಿ, ಜ್ವರ, ಸುಸ್ತು, ಮೈ,ಕೈ ನೋವು, ವಾಂತಿ ಭೇದಿಯಂತ ಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತಿವೆ.
ಕಳೆದ ಹದಿನೈದು ದಿನಗಳಿಂದ ಜಿಲ್ಲೆಯ ಎಲ್ಲಾ ಆಸ್ಪತ್ರೆ, ಕ್ಲಿನಿಕ್, ಮಕ್ಕಳ ಆಸ್ಪತ್ರೆಗಳಲ್ಲಿ ವೈರಲ್ ಫೀವರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಹಿಂದೆಂದಿಗಿಂತಲೂ ಈ ವರ್ಷ ವೈರಲ್ ಫೀವರ್ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ ಅಂತ ವೈದ್ಯರು ಹೇಳುತ್ತಿದ್ದಾರೆ. ವೈರಲ್ ಫೀವರ್‌ಗೆ ಹೆದರುವ ಅಗತ್ಯವಿಲ್ಲ ಆರಂಭದಲ್ಲೇ ಚಿಕಿತ್ಸೆ ಪಡೆದರೇ ಬೇಗ ಗುಣಮುಖರಾಗಬಹುದು. ಆದ್ರೆ ಆರಂಭಿಕ ಹಂತದಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಬೇಕು, ಹೆಚ್ಚು ಬಿಸಿ ನೀರು ಸೇವಿಸಬೇಕು ಅಂತ ಮಕ್ಕಳ ತಜ್ಞ ವೈದ್ಯ ಡಾ.ಮಲ್ಲೇಶ್ ಗೌಡ ಸಲಹೆ ನೀಡಿದ್ದಾರೆ.
ವೈರಲ್ ಫೀವರ್ ಸಾಂಕ್ರಾಮಿಕವಾಗಿರುವುದರಿಂದ ಮನೆಯಲ್ಲಿ, ಶಾಲೆಗಳಲ್ಲಿ ಎಚ್ಚರ ವಹಿಸಬೇಕು. ಮಕ್ಕಳಿಗೆ ಬೇರೆ ಆರೋಗ್ಯ ಸಮಸ್ಯೆಗಳಿದ್ರೆ ಪೋಷಕರು ಹೆಚ್ಚು ಕಾಳಜಿ ವಹಿಸಬೇಕು ಅಂತ ವೈದ್ಯರು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: Ramanagara | ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ – 23 ಮಂದಿಯ ವಿರುದ್ಧ ಎಫ್‌ಐಆರ್