ರಾಯಚೂರು: ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದು, ಕೃಷಿ ಕೆಲಸಕ್ಕೆ ಹೋಗಿದ್ದ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಪುಚ್ಚಲದಿನ್ನಿಯಲ್ಲಿ ನಡೆದಿದೆ.
30 ವರ್ಷದ ಚಂದ್ರಮ್ಮ ಸಿಡಿಲ ಹೊಡೆತಕ್ಕೆ ಮೃತಪಟ್ಟ ದುರ್ದೈವಿ. ಕೃಷಿ ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದ ವೇಳೆ ಮಳೆ ಬರಲು ಶುರುವಾಗಿದೆ. ಮಳೆಯಿಂದಾಗಿ ಚಂದ್ರಮ್ಮ ಮರದ ಕೆಳಗೆ ನಿಂತಿದ್ದಾರೆ. ಈ ವೇಳೆ ಮರಕ್ಕೆ ಸಿಡಿಲು ಬಡಿದಿದ್ದು, ಮರದ ಕೆಳಗೆ ಇದ್ದ ಚಂದ್ರಮ್ಮಗೂ ಸಿಡಿಲು ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Advertisement
Advertisement
ಇನ್ನು ರಾಯಚೂರಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೆಲವೆಡೆ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಇನ್ನೂ ಕೆಲವೆಡೆ ಹಳ್ಳ ಕೊಳ್ಳಗಳು ತುಂಬಿವೆ. ಇದರಿಂದ ಹಳ್ಳದಲ್ಲಿ ಎಮ್ಮೆ ಕೊಚ್ಚಿ ಹೋಗಿರುವ ಘಟನೆಗಳು ನಡೆದಿದ್ದು, ಮಳೆಯ ಅಬ್ಬರದಿಂದ ಹಲವು ಜಾನುವಾರಗಳು ಸಾವನ್ನಪ್ಪಿವೆ.
Advertisement
Advertisement
ನಗರದಲ್ಲೂ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಅಲ್ಲದೇ ರಸ್ತೆಗಳು ನೀರಿನಿಂದ ಆವೃತಗೊಂಡಿದ್ದು ಕೆಲ ಸಮಯ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು. ಜೊತೆಗೆ ವಿದ್ಯುತ್ ವ್ಯವಸ್ಥೆಯೂ ಕೂಡ ಸ್ಥಗಿತಗೊಂಡಿತ್ತು.