ರಾಯಚೂರು: ಬೇಸಿಗೆ ಬಂದರೆ ನೀರಿಗಾಗಿ ಪರದಾಡೋ ಊರಿನಲ್ಲಿ ಈಗ ಎಲ್ಲಿ ನೋಡಿದರೂ ಬರಿ ನೀರೇ. ಹೌದು ಬಿಸಿಲನಾಡು ರಾಯಚೂರು ಈಗ ಅಕಾಲಿಕ ಮಳೆ ಹೊಡೆತಕ್ಕೆ ನಲುಗಿ ಹೋಗಿದೆ. ಒಂದೆಡೆ ಅತಿಯಾದ ಮಳೆಗೆ ಬೆಳೆಗಳೆಲ್ಲಾ ಹಾನಿಯಾಗುತ್ತಿದ್ದರೆ, ನಗರ ಪ್ರದೇಶದಲ್ಲಿ ಜನರ ಜೀವನ ನರಕಯಾತನೆಯಾಗಿದೆ. ತಗ್ಗು ಪ್ರದೇಶಗಳಲ್ಲಿನ ಮನೆಗಳೆಲ್ಲಾ ಜಲಾವೃತವಾಗಿದ್ದು, ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ರಾಯಚೂರು ನಗರದಲ್ಲಿ ಬಿಟ್ಟು ಬಿಟ್ಟು ಸುರಿದ ಭರ್ಜರಿ ಮಳೆಯಿಂದ ಇಲ್ಲಿನ ಜಹಿರಾಬಾದ್, ಅಂಬೇಡ್ಕರ್ ನಗರ, ಮ್ಯಾದರ್ ಓಣಿ, ಆಕಾಶವಾಣಿ ಕೇಂದ್ರದ ಬಳಿಯ ಪ್ರದೇಶಗಳೆಲ್ಲಾ ಜಲಾವೃತವಾಗಿವೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆಲ್ಲಾ ನೀರು ನುಗ್ಗಿದೆ. ಮನೆಯಲ್ಲಿನ ವಸ್ತುಗಳೆಲ್ಲಾ ನೀರಲ್ಲಿ ತೇಲಾಡುತ್ತಿದ್ದು, ದವಸ ಧಾನ್ಯ ನೀರು ಪಾಲಾಗಿವೆ.
Advertisement
ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಸ್ಪಲ್ಪ ಜೋರು ಮಳೆ ಬಂದರೆ ಸಾಕು ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗುತ್ತದೆ. ಎಷ್ಟೇ ನೀರನ್ನ ಎತ್ತಿಹಾಕಿದರು ಇಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಯಲ್ಲ, ಮಳೆ ನಿಲ್ಲುವ ವರೆಗೂ ಮನೆ ತುಂಬಾ ನೀರು ನಿಲ್ಲುತ್ತಿದೆ. ಇನ್ನೂ ರಸ್ತೆಗಳೆಲ್ಲಾ ತುಂಬಿ ಹರಿಯುತ್ತಿರುವುದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
Advertisement
ಒಟ್ಟಿನಲ್ಲಿ, ನಿರೀಕ್ಷೆ ಮೀರಿ ಸುರಿಯುತ್ತಿರುವ ಮಳೆಯಿಂದಾಗಿ ರಾಯಚೂರು ಜನರನ್ನ ಕಂಗೆಡಿಸಿದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಚಿಕ್ಕಮಕ್ಕಳು, ವೃದ್ದರಲ್ಲಿ ಹೆಚ್ಚಾಗಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹವಾಮಾನ ಇಲಾಖೆ ಪ್ರಕಾರ, ಇನ್ನೂ ಒಂದು ದಿನ ಭಾರೀ ಮಳೆ ಬರುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ.