ಉಡುಪಿ/ಮಂಗಳೂರು/ಬೆಂಗಳೂರು: ಗಲ್ಫ್ ರಾಷ್ಟ್ರಗಳನ್ನು ಬೆಚ್ಚಿಬೀಳಿಸಿರುವ ಮೆಕುನು ಚಂಡಮಾರುತ ಕಾರವಳಿಯಲ್ಲೂ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದ್ದು, ಶಾಲೆಯಿಂದ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿ ನೆರೆ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ನಡೆದಿದೆ.
ಇಲ್ಲಿನ ಪಾದೆಬೆಟ್ಟು ಎಂಬಲ್ಲಿ ನಿಧಿ ಆಚಾರ್ಯ ಎಂಬ 9 ವರ್ಷದ ಬಾಲಕಿ ಕಣ್ಮರೆಯಾಗಿದ್ದಾಳೆ. ನಿಧಿ ಆಚಾರ್ಯ ತನ್ನ ಅಕ್ಕ ನಿಶಾ ಆಚಾರ್ಯ ಜೊತೆ ಸೈಕಲ್ ನಲ್ಲಿ ಮನೆಗೆ ತೆರಳುತ್ತಿದ್ದಳು. ಪಟ್ಲ ಎಂಬಲ್ಲಿ ಕಿರು ಸೇತುವೆ ದಾಟುವಾಗ ಅವಘಡವಾಗಿದೆ. ರಭಸವಾಗಿ ಹರಿಯುತ್ತಿದ್ದ ನೀರು ಸೇತುವೆ ಮೇಲೆ ಬಂದಿತ್ತು. ಆ ರಭಸಕ್ಕೆ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ. ನಿಶಾ ಆಚಾರ್ಯಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕಣ್ಮರೆಯಾದ ನಿಧಿ ಆಚಾರ್ಯಳಿಗೆ ಶೋಧಕಾರ್ಯ ಮುಂದುವರಿದಿದೆ.
Advertisement
ಪಡುಬಿದ್ರೆಯ ಗಣಪತಿ ಸ್ಕೂಲ್ ನ ವಿದ್ಯಾರ್ಥಿನಿಯಾಗಿರುವ ನಿಧಿ ಮೂರು ಗಂಟೆಗೆ ಶಾಲೆ ಬಿಟ್ಟಿದ್ದು, ಮಳೆಯಿದ್ದ ಕಾರಣ ಮಕ್ಕಳಿಬ್ಬರು ತಡವಾಗಿ ಶಾಲೆಯಿಂದ ಹೊರಟಿದ್ದಾರೆ. ಕುಟುಂಬಸ್ಥರು, ಸ್ಥಳೀಯರು ಬಾಲಕಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ. ವಿಪರೀತ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.
Advertisement
Advertisement
ಗುಡ್ಡ ಕುಸಿದು ಮಹಿಳೆ ಸಾವು: ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮಂಗಳೂರಿನ ಕೆಪಿಟಿ ಬಳಿ ಮನೆಗೆ ಗುಡ್ದ ಕುಸಿದ ಪರಿಣಾಮ ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ. ಮೋಹಿನಿ (55) ಮಣ್ಣಿನ ಅಡಿ ಸಿಲುಕಿ ಮೃತಪಟ್ಟಿದ್ದಾರೆ. ಬೆಳಗ್ಗೆ 10 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಸತತ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಹಿಳೆಯ ದೇಹವನ್ನು ಹೊರತೆಗೆಯಲಾಗಿದೆ.
Advertisement
ಭಾರೀ ಮಳೆ ಸಾಧ್ಯತೆ: ಇನ್ನು ಮೆಕುನು ಚಂಡಮಾರುತ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದ ನೀರು ಬಣ್ಣ ಬದಲಾಯಿಸಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಕಡಲ ಅಬ್ಬರ ತೀರದಿಂದ ಅರ್ಧ ಕಿ.ಮೀ ದೂರದಿಂದಲೇ ಮೇಲೇರಿ ಬರುತ್ತಿದೆ. ಕಡಲಿನ ಅಬ್ಬರ ಕಂಡು ಕರಾವಳಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಪು, ಮಲ್ಪೆ, ಮರವಂತೆ, ಪಡುಬಿದ್ರೆ ಬೀಚ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಇನ್ನು 24 ಗಂಟೆಗಳ ಕಾಲ ಭಾರೀ ಮಳೆ ಆಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಿಎಂ ಸೂಚನೆ: ಉಡುಪಿ, ದಕ್ಷಿಣ ಕನ್ನಡದಲ್ಲಿ ಭೀಕರ ಮಳೆ ಹಿನ್ನಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಪ್ರವಾಹದಿಂದ ಸಾರ್ವಜನಿಕರನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೇ ರಕ್ಷಣಾ ಕಾರ್ಯಾಚರಣೆಗೆ ಕೋಸ್ಟ್ ಗಾರ್ಡ್ ಪಡೆಯ ನೆರವು ಪಡೆದು ಹೆಚ್ಚಿನ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ವಹಿಸಲು ಆದೇಶ ನೀಡಿದ್ದಾರೆ.
3 ದಿನ ಮುನ್ನವೇ ಮುಂಗಾರು ಆಗಮನ: ದೇಶಕ್ಕೆ ನೈರುತ್ಯ ಮುಂಗಾರು ಮಳೆ 3 ದಿನ ಮುನ್ನವೇ ಕೇರಳದ ಭಾಗಕ್ಕೆ ಆಗಮಿಸಿದ್ದು, ಇನ್ನೂ ಎರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಅಗಮನ ಸಾಧ್ಯತೆ ಇರುವುದಾಗಿ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಕೇರಳ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನಲೆಯಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಭಾರೀ ಮಳೆಯಾಗುವ ಸಂಭವಿದೆ ಎಂದು ತಿಳಿಸಿದ್ದಾರೆ.
https://www.youtube.com/watch?v=-TAoAb4cibM