ಮಂಡ್ಯ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇರುವ ಕಾರಣ ಕಾವೇರಿ ನದಿ ಪಾತ್ರದ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆದೇಶಿಸಲಾಗಿದೆ.
ನವೆಂಬರ್ 2 ರಂದು ಕೆಆರ್‌ಎಸ್ ಭರ್ತಿಯಾಗಿದ್ದ ಹಿನ್ನೆಲೆ ಕೆಆರ್‌ಎಸ್‌ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಾಗಿನ ಅರ್ಪಿಸಿದ್ದರು. ಇದಾದ ಬಳಿಕವೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕೆಆರ್‌ಎಸ್ ಭರ್ತಿಯಾಗಿಯೇ ಉಳಿದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಪಾರ ಪ್ರಮಾಣದ ಮಳೆ ಬಿದ್ದರೆ ಡ್ಯಾಂನಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಸುವ ಸಾಧ್ಯತೆ ಇದೆ. ಹೀಗಾಗಿ ನದಿ ಪಾತ್ರದ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕೆಂದು ಆದೇಶಿಸಲಾಗಿದೆ. ಅಲ್ಲದೇ ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದ ಬಳಿ ಸ್ನಾನ ಮಾಡಲು ಭಕ್ತರು ಕಾವೇರಿ ನದಿಗೆ ಇಳಿಯದಂತೆ ಸೂಚಿಸಲಾಗಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯವಿರುವ ಕೆಆರ್‌ಎಸ್ ಸಂಪೂರ್ಣ ಭರ್ತಿಯಾಗಿದ್ದು, ಡ್ಯಾಂಗೆ 17,135 ಕ್ಯೂಸೆಕ್ ನೀರು ಒಳಹರಿವಿದ್ದು, 18,469 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
ಮತ್ತೊಂದೆಡೆ ಒಂದು ವಾರದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ಹಲವು ಅವಘಡಗಳು ಸಂಭವಿಸಿದ್ದು, ಕಳೆದ ರಾತ್ರಿ ಬಿದ್ದ ಮಳೆಗೆ ಕೆಆರ್‌ಪೇಟೆಯಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದನ್ನೂ ಓದಿ: ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಿದ ಪೊಲೀಸ್ – ವೀಡಿಯೋ ವೈರಲ್
ಕೆಆರ್‌ಪೇಟೆ ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಅಪಾರ ಪ್ರಮಾಣದ ಮಳೆ ಸುರಿದಿದೆ. ಇದರಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿದೆ. ಹಳ್ಳದ ಪ್ರದೇಶದಲ್ಲಿ ಬಸ್ ನಿಲ್ದಾಣ ಇರುವ ಕಾರಣ ಏಕಾಏಕಿ ನೀರು ಹರಿದು ಬಂದ ಕಾರಣ ಬಸ್ ನಿಲ್ದಾಣ ಕೆರೆಯಂತಾಗಿದೆ. ಇದನ್ನೂ ಓದಿ: ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ
ಇದರಿಂದ ಬಸ್ ನಿಲ್ದಾಣದಲ್ಲಿರುವ ಬೇಕರಿ, ಹೋಟೆಲ್, ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದೆ. ಈ ಅವಘಡದಿಂದ ಪ್ರಯಾಣಿಕರು ಪರದಾಡವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ತಿಂಗಳು ಸಹ ಈ ಬಸ್ ನಿಲ್ದಾಣ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಹೀಗಾಗಿ ಈ ಬಗ್ಗೆ ಶ್ರೀಘ್ರವೇ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅವಘಡಗಳು ಸಂಭವಿಸುವ ಸಾಧ್ಯತೆ ಇದೆ.