ಮಹಾರಾಷ್ಟ್ರದಲ್ಲಿ ರಣ ಮಳೆಗೆ 20 ಬಲಿ- ಖೇಡ್ ಬಳಿ ಕೊಚ್ಚಿಹೋಯ್ತು ಬೆಂಗ್ಳೂರು-ಪುಣೆ ಹೆದ್ದಾರಿ

Public TV
1 Min Read
pune rain 2

ಮುಂಬೈ: ಮಹಾರಾಷ್ಟ್ರದ ಪುಣೆ ಹಾಗೂ ವಿವಿಧೆಡೆ ಸುರಿದ ಭಾರೀ ಮಳೆಯಿಂದ ದಿಢೀರ್ ಪ್ರವಾಹ ಉಂಟಾಗಿದ್ದು, ಸುಮಾರು 20 ಮಂದಿ ಬಲಿಯಾಗಿದ್ದಾರೆ ಎನ್ನಲಾಗಿದೆ.

ಪುಣೆ ಬಳಿ ಕೇವಲ 3 ಗಂಟೆಯಲ್ಲಿ 112 ಮಿಮೀ ಮಳೆಯಾಗಿದೆ. ಮಳೆಯ ಅಬ್ಬರಕ್ಕೆ ಖೇಡ್ ಬಳಿ ಬೆಂಗಳೂರು-ಪುಣೆ ಹೆದ್ದಾರಿ ಕೊಚ್ಚಿಹೋಗಿದೆ. ಪುಣೆಯ ಮುಲಾ-ಮುಠಾ ನದಿ ಉಕ್ಕಿ ಹರಿದ ಪರಿಣಾಮ ಹಲವು ವಾಹನಗಳು ಕೊಚ್ಚಿ ಹೋಗಿದ್ದು, ಕೊಚ್ಚಿ ಹೋದ ವಾಹನಗಳಲ್ಲಿ 4 ಮೃತದೇಹಗಳು ಪತ್ತೆಯಾಗಿವೆ. ಇತ್ತ ಕಟ್ಟಡ ಮತ್ತು ಕಾಂಪೌಂಡ್ ಕುಸಿದು 6 ಮಂದಿ ಮೃತಪಟ್ಟಿದ್ದಾರೆ. ಅವಶೇಷಗಳ ತೆರವು ಕಾರ್ಯ ನಡೆಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗೆಯೇ ಮುಠಾ ನದಿಯ ಸೆಳೆತಕ್ಕೆ ಸಿಲುಕಿ ಮೂವರು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಹೀಗೆ ಸುಮಾರು 20 ಮಂದಿ ರಣ ಮಳೆಗೆ ಸಾವನ್ನಪ್ಪಿದ್ದಾರೆ.

ಅಲ್ಲದೆ ಪುಣೆ, ಸತಾರ ಹೆದ್ದಾರಿಯ ಹಲವೆಡೆ ಭೂಕುಸಿತ ಉಂಟಾಗಿದೆ. ಪುಣೆಯ ಬಹುತೇಕ ರಾಜಕಾಲುವೆಗಳು, ಒಳಚರಂಡಿಗಳು ಉಕ್ಕಿ ಹರಿದಿದ್ದರಿಂದ ದಿಢೀರ್ ಪ್ರವಾಹ ಉಂಟಾಗಿದೆ. ಪುಣೆ ಹೊರವಲಯದ ಶೆಡ್‍ನಲ್ಲಿ ಮಲಗಿದ್ದ ನಾಲ್ವರು ಕೂಲಿ ಕಾರ್ಮಿಕರು ಕೊಚ್ಚಿ ಹೋಗಿದ್ದಾರೆ. ಪುಣೆಯ ಬಳಿ ಬಾರಾಮತಿ ಪಟ್ಟಣದಲ್ಲೂ ಭಾರೀ ಪ್ರವಾಹ ತಲೆದೋರಿದೆ.

ಲೋನಾವಾಲಾ ಪರ್ವತ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಖಾರಾ ನದಿ ಉಕ್ಕಿ ಹರಿದಿದೆ. ಇದರಿಂದ ತಗ್ಗು ಪ್ರದೇಶದಲ್ಲಿದ್ದ ಮನೆಗಳು ಜಲಾವೃತವಾಗಿದ್ದು ಸುಮಾರು 16 ಸಾವಿರ ಜನರನ್ನು ಎಡಿಆರ್‍ಎಫ್ ತಂಡ ಹಾಗೂ ಇತರೆ ರಕ್ಷಣಾ ತಂಡ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಹಾಗೆಯೇ ಮಳೆಯ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Share This Article