ಬೆಂಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಮತ್ತಷ್ಟು ಕ್ಷೀಣಿಸಿದೆ. ಆದರೆ ಮಹಾರಾಷ್ಟ್ರದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವುರಿಂದ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಉಂಟಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಮೂರು ಸೇತುವೆಗಳು ಜಲಾವೃತವಾಗಿವೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ಮಳೆ ಗಾಳಿಗೆ ಮನೆಯೊಂದು ನೆಲಸಮವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗುಡ್ಡ ಕುಸಿದು ಕೃಷ್ಣಾಶ್ರಮ ಮಠಕ್ಕೆ ನೀರು ನುಗ್ಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದ್ದು, ಗದಗ, ಹಾವೇರಿ, ದಕ್ಷಿಣ ಕನ್ನಡ, ಚಿಕ್ಕಮಗಳೂರಿನಲ್ಲಿ ಸ್ವಲ್ಪ ಮಳೆಯಾಗಿದೆ.
Advertisement
Advertisement
ಇತ್ತ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು ಮತ್ತೆ ವಾಣಿಜ್ಯ ನಗರಿಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುರ್ಬಾದ್ ಮತ್ತು ಕಲ್ಯಾಣ್ ನಗರ ಸಂಪರ್ಕಿಸುವ ರಾಯ್ತಾ ಎಂಬಲ್ಲಿ ಉಲಾಸ್ ನದಿಗೆ ಕಟ್ಟಿದ ಸೇತುವೆಯೇ ಕುಸಿದು ಬಿದ್ದಿದೆ. ಬೈಕುಲ್ಲಾದಲ್ಲಿ ಕಟ್ಟಡ ಕುಸಿದು ಒಬ್ಬರಿಗೆ ಗಾಯಗಳಾಗಿದೆ. ರೈಲು ಹಳಿಗಳಲ್ಲಿ ನೀರು ನಿಂತ ಪರಿಣಾಮ 5 ರೈಲುಗಳ ಸಂಚಾರ ನಿಷೇಧಿಸಲಾಗಿದೆ. 6ಕ್ಕೂ ಹೆಚ್ಚು ರೈಲುಗಳ ಮಾರ್ಗ ಬದಲಾಯಿಸಲಾಗಿದೆ. ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ.
Advertisement
Advertisement
ಮುಂಬೈ, ಥಾಣೆ, ರಾಯ್‍ಗಡ್, ಪಲ್ಘಾಟ್‍ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 1,311 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಎನ್‍ಡಿಆರ್ ಎಫ್ ತಂಡ ಪ್ರವಾಹಪೀಡಿತ ಸ್ಥಳಗಳಲ್ಲಿ ಬೀಡುಬಿಟ್ಟಿದೆ. ಗೋವಾ, ಗುಜರಾತ್, ರಾಜಸ್ಥಾನದಲ್ಲೂ ಭಾರೀ ಮಳೆ ಆಗುತ್ತಿದೆ. ಜಮ್ಮುವಿನಲ್ಲಿ ಮಳೆ ಮತ್ತು ಹಿಮಪಾತದ ಕಾರಣ ಅಮರನಾಥ ಯಾತ್ರೆಯನ್ನು ರದ್ದು ಮಾಡಲಾಗಿದೆ.