ಬೆಂಗಳೂರು: ಕಳೆದ ದಿನ ಕೋಲಾರ, ಮೈಸೂರು, ರಾಮನಗರ ಮತ್ತು ಬೆಂಗಳೂರು ಸೇರಿದಂತೆ ನಗರದ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ಜನರು ಸಂತಸ ಪಟ್ಟಿದ್ದಾರೆ.
ಕೋಲಾರ ನಗರದಲ್ಲಿ ಆಲಿಕಲ್ಲು ಸಹಿತ ಜೋರು ಮಳೆಯಾಗಿದ್ದು, ಮಳೆಯಿಂದಾಗಿ ಬಿಸಿಲಿನಿಂದ ಬಳಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜೊತೆಗೆ ಕೃಷಿ ಚಟುವಟಿಕೆಗಳನ್ನು ಶುರುಮಾಡಿದ್ದಾರೆ. ಸುಮಾರು 30 ನಿಮಿಷದಿಂದ ಗುಡುಗು, ಬಿರುಗಾಳಿ ಆಲಿಕಲ್ಲು ಸಹಿತ ಜೋರು ಮಳೆಯಾಗಿದ್ದು, ಇದರಿಂದ ಜನರು ಖುಷಿಯಾಗಿದ್ದರು. ಕೋಲಾರ ತಾಲೂಕಿನ ತೇರಹಳ್ಳಿ ಬೆಟ್ಟದ ಚುಕ್ಕಿ ಮೇಳದಲ್ಲಿ ಆಲಿಕಲ್ಲು ಹಿಡಿದು ಸಂತಸ ಪಟ್ಟಿದ್ದರು.
Advertisement
Advertisement
ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಮಳೆರಾಯ ತಂಪನ್ನೆರೆದಿದ್ದಾನೆ. ಜಿಲ್ಲೆಯಾದ್ಯಂತ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಗುಡುಗು, ಸಿಡಿಲು, ಗಾಳಿ ಸಹಿತ ಜೋರು ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆಯ ಆರ್ಭಟಕ್ಕೆ ಕೊಡೆಯ ಆಸರೆ ಪಡೆಯುವಂತಾಗಿತ್ತು. ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೇ ವಾಹನ ಸವಾರರು ರಸ್ತೆಯಲ್ಲಿ ನಿಂತ ಮಳೆ ನೀರಿನಿಂದ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
Advertisement
Advertisement
ಸಿಲಿಕಾನ್ ಸಿಟಿಯ ನಾಗಾವರ, ಕಮ್ಮನಹಳ್ಳಿ, ಕೆ.ಆರ್ ಪುರಂ, ಯಶವಂತಪುರ, ಕೆಂಗೇರಿ ಸೇರಿದಂತೆ ನಗರದ ಹಲವೆಡೆ ವರುಣ ಆರ್ಭಟಿಸಿದ್ದು, ರಸ್ತೆಯಲ್ಲ ಕೆರೆಯಂತಾಗಿ ಮಾರ್ಪಟ್ಟಿದ್ದವು. ವಾಹನ ಸವಾರರು ಪರದಾಡಿದ್ದರು. ಕೆಂಗೇರಿ ಮತ್ತು ಹಲಸೂರು ಭಾಗದಲ್ಲಿ ಮೂರು ಮರಗಳು ಧರೆಗುರುಳಿದ್ದು, ವೈಟ್ ಪೀಲ್ಡ್ ನಿಂದ ಚಿಕ್ಕ ತಿರುಪತಿಗೆ ಸಂಪರ್ಕ ಕಲ್ಪಿಸುವ ದುನ್ನಸಂದ್ರದ ರಾಷ್ಟ್ರೀಯ ಹೆದ್ದಾರಿ 207ರಲ್ಲಿ ನೋಡನೋಡುತ್ತಲೇ ಬೃಹದಾಕಾರದ ಮರ ಉರುಳಿ ಬಿದ್ದಿತ್ತು.
ಇನ್ನು ಎರಡು ದಿನಗಳ ಕಾಲ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮುಂದುವರಿಯುವ ಸೂಚನೆಯನ್ನ ನೈಸರ್ಗಿಕ ವಿಕೋಪ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.