ಮಡಿಕೇರಿ: ಒಂದೆಡೆ ಕೊಡಗಿನಲ್ಲಿ ಮಳೆಗಾಗಿ ಹೋಮ ಹವನ ನಡೆಸುತ್ತಿದ್ದರೆ, ಇನ್ನೊಂದೆಡೆ ಭಾಗಮಂಡಲದಲ್ಲಿ ಮಳೆ ಜೋರಾಗಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.
ಕಳೆದ ರಾತ್ರಿಯಿಂದ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ, ಕನ್ನಿಕೆ, ಸುಜ್ಯೋತಿ ನದಿಗಳು ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮದ ನೀರಿನ ಮಟ್ಟ ಗಣನೀಯವಾಗಿ ಏರುತ್ತಿದೆ.
ಇಂದೂ ರಾತ್ರಿಯೂ ಧಾರಕಾರವಾಗಿ ಮಳೆ ಸುರಿದರೆ ಎರಡು ದಿನದಲ್ಲಿ ತ್ರಿವೇಣಿ ಸಂಗಮ ಮುಳುಗಡೆಯಾಗುವ ಸಾಧ್ಯತೆಯಿದೆ.
ಇಂದು ಬೆಳಗ್ಗೆಯಷ್ಟೇ ಕೊಡಗಿನಲ್ಲಿ ಮಳೆ ಬರುತ್ತಿಲ್ಲ ಎಂಬ ಆತಂಕದಿಂದ ಕೊಡಗು ಜಿಲ್ಲೆಯ ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಹೋಮ, ಹವನ ನಡೆಸಲಾಯಿತು. ಈ ಮೂಲಕ ಭಕ್ತಿಪೂರ್ವಕವಾಗಿ ಕರುಣೆ ತೋರು ಎಂದು ಜನ ಬೇಡಿಕೊಂಡಿದ್ದರು.
ಕಳೆದ ಬಾರಿ ಅತೀವೃಷ್ಟಿ ಆಗಿದ್ದರೆ ಈ ಬಾರಿ ಅನಾವೃಷ್ಟಿ ಕಾಡುತ್ತದೆ ಎಂಬ ಆತಂಕದಲ್ಲಿ ಕೊಡಗಿನ ಜನತೆ ದೇವರ ಜಪ ಮಾಡುತ್ತಿದ್ದಾರೆ. ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಕುಶಲ ಅರ್ಚಕರ ಸಂಘದ ವತಿಯಿಂದ ಕೊಡಗಿಗೆ ಉತ್ತಮ ಮಳೆಯಾಗಲಿ, ಮಳೆ ಅನಾಹುತ ಸಂಭವಿಸದಿರಲಿ ಎಂದು 13 ಜನ ಅರ್ಚಕರಿಂದ ಯಾಗ ನಡೆಸಲಾಯಿತು. ಶತರುದ್ರ ಪಾರಾಯಣ, ರುದ್ರ ಹೋಮ ನೆರವೇರಿಸಿ ವರುಣ ದೇವ ಕೃಪೆ ತೋರು ಎಂದು ಪ್ರಾರ್ಥಿಸಲಾಯಿತು.