ಮಡಿಕೇರಿ: ಕೊಡಗು (Kodagu) ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆ (Rain) ಸುರಿಯುತ್ತಿದೆ. ಕಳೆದ ರಾತ್ರಿಯಿಂದ ಒಂದೇ ಸಮನೇ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ನದಿ, ತೊರೆಗಳು ಮತ್ತೆ ಉಕ್ಕಿ ಹರಿಯಲಾರಂಭಿಸಿವೆ. ಕ್ಷಣ ಕ್ಷಣಕ್ಕೂ ಒಳಹರಿವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಹಾರಂಗಿ ಜಲಾಶಯದಿಂದ (Harangi Dam) ಕಾವೇರಿ ನದಿಗೆ (Cauvery River) 11,800 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಅಲ್ಲದೇ ಇಂದು (ಸೋಮವಾರ) ಬೆಳಗ್ಗೆ ಕೊಡಗಿನ ಅಲ್ಲಲ್ಲಿ ಸುರಿದ ಭಾರೀ ಮಳೆಯಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ. ಬೆಳಗ್ಗೆ 8 ಗಂಟೆ ಹೊತ್ತಿಗೆ 2,362 ಕ್ಯುಸೆಕ್ ಇದ್ದ ಒಳ ಹರಿವು 11 ಗಂಟೆಯ ವೇಳೆಗೆ 7,800 ಕ್ಯುಸೆಕ್‌ಗೆ ಏರಿಕೆಯಾಗಿದೆ. ಈ ಹಿನ್ನೆಲೆ ಜಲಾಶಯದ ಸುರಕ್ಷಿತ ದೃಷ್ಟಿಯಿಂದ ಮಧ್ಯಾಹ್ನದ ಬಳಿಕ ಕಾವೇರಿ ನದಿಗೆ ನೀರನ್ನು ಹೊರಬಿಡಲಾಗುತ್ತಿದೆ. ಇದನ್ನೂ ಓದಿ: ಗೌರಿ ಹಬ್ಬದ ದಿನ ಸಿಎಂ ಗಂಗೆ ಪೂಜೆ, ಎತ್ತಿನಹೊಳೆ ಯೋಜನೆ ನೀರು ಬಿಡುಗಡೆ: ಡಿಕೆಶಿ
ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲದೇ ಜಿಲ್ಲೆಯಾದ್ಯಂತ ಮಳೆ ಅರ್ಭಟ ಮುಂದುವರೆಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದನ್ನೂ ಓದಿ: ಜಮ್ಮು ಸೇನಾ ನೆಲೆಯ ಮೇಲೆ ಉಗ್ರರ ದಾಳಿ – ಯೋಧನಿಗೆ ಗಾಯ