ಮಡಿಕೇರಿ: ರಾಜ್ಯದಲ್ಲಿ ಇಂದು ಕೂಡ ವರುಣನ ಅಬ್ಬರ ಮುಂದುವರಿದಿದ್ದು, ಮಳೆಯ ಅಬ್ಬರಕ್ಕೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಡಿಕೇರಿ ತಾಲೂಕಿನ ಭೇತ್ರಿ ಹೊಳೆ ಉಕ್ಕಿ ಹರಿಯುತ್ತಿದೆ. ಪರಿಣಾಮ ಮಡಿಕೇರಿ ವಿರಾಜಪೇಟೆ ಸಂಪರ್ಕ ರಸ್ತೆ ಜಲಾವೃತವಾಗಿದ್ದು, ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ.
ಕಳೆದ ಬಾರಿಯಂತೆ ಈ ವರ್ಷವೂ ಕುಶಾಲನಗರ ಮತ್ತೆ ಮುಳುಗುವ ಭೀತಿಯಲ್ಲಿದೆ. ಕುಶಾಲನಗರ ಕುವೆಂಪು ಬಡಾವಣೆ ಮತ್ತು ಸಾಯಿ ಬಡಾವಣೆಗಳು ಕಳೆದ ಬಾರಿ ಮುಳುಗಡೆಯಾಗಿತ್ತು. ಸದ್ಯ ನೀರು ಕುಶಾಲನಗರದ ತಗ್ಗು ಪ್ರದೇಶದಗಳಿಗೆ ನೀರು ಹರಿದಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಗೋಣಿಕೊಪ್ಪದ ಹರಿಶ್ಚಂದ್ರಪುರದ ಬಡಾವಣೆಗೆ ನೀರು ನುಗ್ಗಿ ಹಲವು ಮನೆಗಳು ಜಲಾವೃತವಾಗಿದೆ.
Advertisement
Advertisement
ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲ ಗ್ರಾಮಗಳು ಭಾರೀ ಸಮಸ್ಯೆ ಎದುರಿಸಿದ್ದು, ಸೂರ್ಲಬ್ಬಿ, ಕಿಕ್ಕರಳ್ಳಿ, ಗರ್ವಾಲೆ, ಹಮ್ಮಿಯಾಲ, ಮುಟ್ಲು ಗ್ರಾಮದಲ್ಲಿ ವಿದ್ಯುತ್ ಕಡಿತವಾಗಿದೆ. ವಿದ್ಯುತ್ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ಮೊಬೈಲ್ ನೆಟ್‍ವರ್ಕ್ ಕೂಡ ಸಿಗುತ್ತಿಲ್ಲ ಎಂದು ಸ್ಥಳೀಯರು ಸಾಮಾಜಿಕ ಜಾಲತಾಣ ಮೂಲಕ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
Advertisement
ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ವಿರಾಜಪೇಟೆ ತಾಲ್ಲೂಕಿನ ನಾಪೋಕ್ಲು ಬಳಿಕ ಚೆರಿಯಪರಂಬು ಗ್ರಾಮದ ನೂರಕ್ಕೂ ಅಧಿಕ ಮನೆಗಳು ಜಲಾವೃತವಾಗಿದೆ. ಪರಿಣಾಮ ಗ್ರಾಮದ ಜನರನ್ನು ನಾಪೋಕ್ಲುವಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
Advertisement
ಈ ನಡುವೆ ಕರ್ನಾಟಕ ಕೇರಳ ನಡುವಿನ ಅಂತರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಕುಟ್ಟ-ಕೇರಳ ರಸ್ತೆಯಲ್ಲಿ ಮರ ಬಿದ್ದ ಹಿನ್ನೆಲೆ ವಾಹನ ಸಂಚಾರ ಸ್ಥಗಿತವಾಗಿದ್ದು, ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆಯಲ್ಲಿ ಬಸ್ ಗಳ ನಿಲುಗಡೆ ಮಾಡಲಾಗಿದೆ. 5 ದಿನಗಳ ಹಿಂದೆಯಷ್ಟೇ ಮಾಕುಟ್ಟ ರಸ್ತೆ ಕುಸಿತ ಆಗಿದ್ದ ಪರಿಣಾಮ ಕೇರಳಕ್ಕೆ ತೆರಳುವ ಒಂದು ಮಾರ್ಗ ಬಂದ್ ಆಗಿತ್ತು. ಇಂದು ಮರ ಉರುಳಿಬಿದ್ದು ಇಬ್ಬ ಏಕೈಕ ಮಾರ್ಗವಾದ ಕುಟ್ಟ ಮಾರ್ಗ ಕೂಡ ಬಂದ್ ಆಗಿದೆ. ಕೊಡಗಿನಲ್ಲಿ ಮಳೆ ಮುಂದುವರಿಯುತ್ತಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಕುಶಾಲನಗರ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯ 275ರ ಸೇತುವೆ ಮೇಲೆ ನೀರು ಹರಿಯುವ ಸಾಧ್ಯತೆ ಇದೆ. ಒಂದೊಮ್ಮೆ ಸೇತುವೆ ಜಲಾವೃತವಾದಲ್ಲಿ ಕೊಡಗು, ಮೈಸೂರು ಸಂಪರ್ಕ ಕಡಿತ ಸಾಧ್ಯತೆ ಇದೆ.