ಬೆಂಗಳೂರು: ರಾಜ್ಯದ ಹಲವೆಡೆಗಳಲ್ಲಿ ಇಂದು ಭಾರೀ ಮಳೆಯಾಗಿದೆ. ಮಲೆನಾಡಿನಲ್ಲಿ ಮತ್ತೆ ಮಳೆಯಾಗಿದ್ದು ಹೊಸನಗರ ತಾಲೂಕಿನ ನಗರ ಹೋಬಳಿಯ ಬಾಳೆಕೊಪ್ಪ ಸಂಪರ್ಕ ಕಡಿತಗೊಂಡಿದೆ. ಸುರಿದ ಭಾರೀ ಮಳೆಗೆ ರಸ್ತೆ ಮೇಲೆ ಎರಡು ಅಡಿ ನೀರು ನಿಂತ ಪರಿಣಾಮ ಬಾಳೆಕೊಪ್ಪ ಮಾರ್ಗ ಬಂದ್ ಆಗಿದೆ.
ಹಿನ್ನೀರು ಒಮ್ಮೆಲೆ ಏರಿ ಬಂದ ಪರಿಣಾಮ ಬಾಳೆಕೊಪ್ಪ ಸಂಪರ್ಕ ಕಡಿತಗೊಂಡಿದೆ. ಶಾಲೆಗೆ ಹೊರಟ ಬಾಳೆಕೊಪ್ಪ, ಸೂಲಿಕಲ್ಲು, ಮುಂಡುಕೋಡು, ಕೆರೆಮಠ ಗ್ರಾಮದ ಜನತೆ ಪರದಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಶ್ರೀಧರಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಿಂಗನಮಕ್ಕಿ ಡ್ಯಾಂ ತುಂಬಿದ್ದು, ಶರಾವತಿ ನದಿಗೆ ನಿನ್ನೆಯಿಂದ ನೀರು ಹರಿಸಲಾಗುತ್ತಿದೆ.
Advertisement
ಬಳ್ಳಾರಿಯಲ್ಲೂ ಮಳೆಯಾಗಿದ್ದು, ಜಿಲ್ಲೆಯ ಸಂಡೂರು ತಾಲೂಕಿನ ಭುಜಂಗನಗರದಲ್ಲಿ ಮಣ್ಣಿನ ಮನೆ ಕುಸಿದು ವೃದ್ಧೆ ಮೃತಪಟ್ಟಿದಲ್ಲದೇ ಮತ್ತೊಬ್ಬ ಮಹಿಳೆ ಗಾಯಗೊಂಡ ಘಟನೆ ನಡೆದಿದೆ. ಇನ್ನೊಬ್ಬ ಮಹಿಳೆಗೆ ಗಾಯವಾಗಿದ್ದು, ಬಸಮ್ಮ(70) ಮೃತ ವೃದ್ಧೆ ಎಂದು ಗುರುತಿಸಲಾಗಿದೆ. ಬಸಮ್ಮ ಸಹೋದರಿ ಉಜ್ಜಮ್ಮಗೆ ಗಾಯವಾಗಿದೆ. ಆಗಸ್ಟ್ 30 ಮತ್ತು ಸೆ.1ರಂದು ಸುರಿದ ಮಳೆಗೆ ನೆನೆದಿದ್ದ ಮನೆಯ ಮಣ್ಣಿನ ಗೋಡೆಗಳು ಕುಸಿದ ಪರಿಣಾಮ ಈ ದುರಂತ ನಡೆದಿದೆ. ಜನರು ರಕ್ಷಣಾ ಕಾರ್ಯ ನಡೆಸಿದರೂ ಬಸಮ್ಮನ ಪ್ರಾಣ ಉಳಿಯಲಿಲ್ಲ. ಗಾಯಾಳು ಉಜ್ಜಮ್ಮಳನ್ನು ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಭಾರ ತಹಶೀಲ್ದಾರ್ ಶಿವಕುಮಾರ್ ಹಾಗೂ ಆರ್‍ಐ ಮುರಳಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
Advertisement
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಬೆಳಗ್ಗೆಯಿಂದಲೇ ಮಳೆಯ ಅಬ್ಬರ ಜೋರಾಗಿದೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದಿವೆ. ಚಾರ್ಮಾಡಿ ಘಾಟ್ ಸೇರಿದಂತೆ ಕೊಟ್ಟಿಗೆಹಾರ ಸುತ್ತಮುತ್ತ ಭಾರೀ ಮಳೆಯಾಗಿದೆ. ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮುಗ್ರಹಳ್ಳಿ ಗ್ರಾಮದ ಸೇತುವೆ ಕುಸಿಯೋ ಹಂತ ತಲುಪಿದ್ದು, ಜನ ಆತಂಕಕ್ಕೀಡಾಗಿದ್ದಾರೆ.
Advertisement
ಇತ್ತ ಕೊಡಗು ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ಮುಂಜಾನೆಯಿಂದಲೂ ಸುರಿಯುತ್ತಿರೋ ಮಳೆಗೆ ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ಬಿಟ್ಟು ಬಿಡದೆ ಸುರಿಯುತ್ತಿರೋ ಮಳೆಯಿಂದಾಗಿ ಕೊಡಗು ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ. ಮಡಿಕೇರಿ, ಕಾವೇರಿ ಪುಣ್ಯಕ್ಷೇತ್ರ ತಲಕಾವೇರಿ ಭಾಗಮಂಡಲ ಸೇರಿ ಹಲವು ಕಡೆಗಳಲ್ಲಿ ಮುಂಜಾನೆಯಿಂದಲೂ ಬಿಟ್ಟು ಬಿಡದೆ ಮಳೆ ಸುರಿಯುತ್ತಿರೋದರಿಂದ ಜಿಲ್ಲೆಯಲ್ಲಿ ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಕೋಲಾರ ಜಿಲ್ಲೆಯ ಹಲವೆಡೆ ಕೂಡ ವರುಣನ ಆರ್ಭಟ ಜೋರಾಗಿದೆ. ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದಂಗೆ ತುಂತುರು ಮಳೆ ಆರಂಭವಾಗಿದೆ. ಅಲ್ಲದೆ ಇಂದು ಸುಮಾರು ಒಂದು ಗಂಟೆಯಿಂದ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಅಲ್ಲದೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.