ಬೆಂಗಳೂರು: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ರಣ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಕೊಡಗು, ಉಡುಪಿ, ಚಿಕ್ಕಮಗಳೂರು ಸೇರಿದಂತೆ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಹವಾಮಾನ ಇಲಾಖೆ ಮತ್ತೆರಡು ದಿನ ಆರೆಂಜ್ ಅಲರ್ಟ್ ಸೂಚಿಸಿದೆ.
Advertisement
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯ ಪರಿಣಾಮ ಮರ, ವಿದ್ಯುತ್ ಕಂಬ ಧರೆಗುರುಳಿದೆ. ಹಲವೆಡೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದು, ಮೊಬೈಲ್ ನೆಟ್‍ವರ್ಕ್ ಸಿಗದಂತಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಕಳೆದೆರಡು ದಿನಗಳಿಂದ ತುಂಬಿ ಹರಿಯುತ್ತಿದೆ. ಹೀಗೆ ಮಳೆ ಮುಂದುವರಿದರೆ ಭಾಗಮಂಡಲದ ಕೇಶಮುಂಡನ ಸೇರಿದಂತೆ ಸುತ್ತಮತ್ತಲಿನ ಪ್ರದೇಶ ಜಲಾವೃತಗೊಳ್ಳಲಿದೆ. ಮಡಿಕೇರಿ ವಿರಾಜಪೇಟೆ ಸಂಪರ್ಕ ಕಲ್ಪಿಸುವ ಬೇತ್ರಿ ನದಿಯಲ್ಲಿಯೂ ನೀರಿನ ಪ್ರಮಾಣ ಏರಿಕೆಯಾಗಿದೆ. ಕುಶಾಲನಗರದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ. ಸೋಮವಾರಪೇಟೆ ತಾಲೂಕಿನ ಸುಳುಗಳಲೆ ಗ್ರಾಮದಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಮಳೆ ಹಿನ್ನೆಲೆ ಇಂದು ಕೊಡಗಿನ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಸರಳವಾಸ್ತು ಗುರೂಜಿ ಹೆಸರು ಹೇಳಿ ಆಸ್ತಿ ಮಾಡಲು ಮುಂದಾಗಿದ್ದ ಹಂತಕರು
Advertisement
Advertisement
ಮತ್ತೊಂದೆಡೆ ಉಡುಪಿಯಲ್ಲಿ 3 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕುಂದಾಪುರ ಭಾಗದ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು, ಕುಬ್ಜಾ ನದಿ ತುಂಬಿ ಹರಿಯುತ್ತಿದೆ. ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ಮಳೆ ನೀರು ಹರಿದಿದೆ. ಪ್ರತಿವರ್ಷದಂತೆ ನದಿನೀರು ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸುತ್ತಿದ್ದಂತೆ ಅರ್ಚಕರು ದೇವಿಗೆ ಆರತಿಯನ್ನು ಬೆಳಗಿದರು. 2 ದಿನ ಆರೆಂಜ್ ಅಲರ್ಟ್ ಹಿನ್ನೆಲೆ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೈಂದೂರು ತಾಲೂಕಿನ ಮರವಂತೆಯಲ್ಲಿ ಕಡಲಬ್ಬರಕ್ಕೆ ಹತ್ತಾರು ತೆಂಗಿನ ಮರಗಳು, ಭೂಭಾಗ ಸಮುದ್ರಪಾಲಾಗಿವೆ. ಉಡುಪಿ ಜಿಲ್ಲೆಯಾದ್ಯಂತ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ನೇತ್ರಾವತಿ, ಕುಮಾರಧಾರ, ಫಲ್ಗುಣಿ, ನಂದಿನಿ ನದಿಗಳಿಗೆ ಹರಿವು ಹೆಚ್ಚಾಗಿದೆ. ಅಲ್ಲದೇ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
Advertisement
ಇದೇ ರೀತಿ ಚಿಕ್ಕಮಗಳೂರಿನಲ್ಲಿಯೂ ಮಳೆ ಮುಂದುವರೆದಿದೆ. ಕಳಸ ತಾಲೂಕಿನ ಹೆಮ್ಮಕ್ಕಿಯಲ್ಲಿ ಮನೆ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂ ಆಗಿದೆ. ಮನೆಯಲ್ಲಿದ್ದ ನಾಲ್ವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕೆರೆಕಟ್ಟೆ ಹಾಗೂ ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ-ಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ. ತುಂಗೆಯ ಅಬ್ಬರಕ್ಕೆ ಶೃಂಗೇರಿ ಶಾರದಾಂಭೆ ದೇಗುಲದ ಪಾರ್ಕಿಂಗ್ ಜಾಗ ಸಂಪೂರ್ಣ ಮುಳುಗಡೆಯಾಗಿದೆ. ಇದನ್ನೂ ಓದಿ: ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್
ಇನ್ನೊಂದೆಡೆ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಗಾಗಿ ತೀವ್ರ ಶೋಧ ಮುಂದುವರೆದಿದೆ. ಜಿಲ್ಲಾಡಳಿತದ ಮನವಿ ಮೇರೆಗೆ ಬೆಂಗಳೂರಿನಿಂದ ಎಸ್‌ಡಿಆರ್‌ಎಫ್ ತಂಡ ಆಗಮಿಸಿದೆ. ಮಳೆ ಅಬ್ಬರಕ್ಕೆ ಡಿಸಿ, ಎಸ್‍ಪಿ ಕೂಡ ಸಿಕ್ಕಿ ಪರದಾಡಿದ್ದಾರೆ. ಮಳೆ ಹಿನ್ನೆಲೆ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಇಂದಿನಿಂದ 9ನೇ ತಾರೀಖಿನವರೆಗೂ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನ ಲಕ್ಯಾ, ಅಂಬಳೆ ಹೋಬಳಿ ಹೊರತುಪಡಿಸಿ ಉಳಿದ ಕಡೆ ರಜೆ ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ಚತುಷ್ಪಥ ಕಾಮಗಾರಿ ಹಾಗೂ ನೌಕಾನೆಲೆಯವರ ಯಡವಟ್ಟಿನಿಂದಾಗಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಖುದ್ದು ಶಾಸಕಿ ರೂಪಾಲಿ ನಾಯ್ಕ್ ಸಂಬಂಧಪಟ್ಟವರನ್ನು ತರಾಟೆ ತೆಗೆದುಕೊಂಡರು. ಜೋಯಿಡಾ ತಾಲೂಕಿನ ಅಣಶಿ ಭಾಗದಲ್ಲಿ ಗುಡ್ಡ ಕುಸಿತವಾಗಿದೆ. ಶಿರಸಿಯ ಒಣಕೇರಿ ಹಾಗೂ ಮುಸ್ಲಿಂ ಗಲ್ಲಿಯಲ್ಲಿ ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಹಾಳಾಗಿದೆ. ಶಿರಸಿ-ಕುಮಟಾ ಹೆದ್ದಾರಿಯಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಇದಲ್ಲದೇ ಕಾಳಿ, ಶರಾವತಿ, ವರದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಳೆ ಹಿನ್ನೆಲೆ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.