ಬೆಂಗಳೂರು: ಸೋಮವಾರ ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯಾಗುವ ಮೂಲಕ ಆತಂಕ ಸೃಷ್ಟಿಸಿತ್ತು. ಇದೀಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಸಂತಸಗೊಂಡಿದ್ದಾರೆ. ಆದರೆ ಹಾವೇರಿಯಲ್ಲಿ ಲಕ್ಷಾಂತರ ರೂ. ಬಾಳೆ ಬೆಳೆ ನಾಶವಾಗಿದೆ.
Advertisement
ಹಾವೇರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ ವಿವಿಧೆಡೆ ಮಳೆಯಾಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಬಿರುಗಾಳಿ ಸಹಿತ ಮಳೆಗೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಭಾರೀ ಮಳೆಯಿಂದಾಗಿ ರೈತರಲ್ಲಿ ಮಂದಹಾಸ ಮೂಡಿದೆ.
Advertisement
ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜಿಲ್ಲೆಯ ಶೃಂಗೇರಿ, ಕೊಪ್ಪ, ಕಳಸ, ಹೊರನಾಡು, ಮೂಡಿಗೆರೆ ಸೇರಿದಂತೆ ಹಲವೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ಭಾರೀ ಗಾಳಿ ಮಳೆಗೆ ತತ್ತರಿಸಿದ್ದು, ಗಾಳಿ, ಮಳೆಯಿಂದಾಗಿ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆ ಸುರಿದಿದೆ.
Advertisement
Advertisement
ಗಾಳಿ-ಮಳೆ ಹಲವೆಡೆ ಅವಾಂತರ ಸೃಷ್ಟಿಸಿದ್ದು, ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪದಲ್ಲಿ ಬಿರುಗಾಳಿ-ಮಳೆಗೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇದರಿಂದಾಗಿ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬಿಕ್ಕರಣೆಕಟ್ಟೆಯಲ್ಲಿ ಬೃಹತ್ ಮರ ಕೊಟ್ಟಿಗೆಯ ಮೇಲೆ ಬಿದ್ದಿದ್ದು, ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಸಂಪೂರ್ಣ ಜಖಂ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸಹ ಭಾರೀ ಮಳೆಯಾಗಿದ್ದು, ಬೆಳ್ತಂಗಡಿ ತಾಲೂಕಿನ ಕೊಯ್ಯೂರು, ಧರ್ಮಸ್ಥಳ, ಉಜಿರೆ ಸುತ್ತಮುತ್ತ ಬಿರುಗಾಳಿ-ಮಳೆಗೆ ಹಲವು ಮರಗಳು, ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಸಹ ಭಾರೀ ಮಳೆಯಾಗಿದ್ದು, ಶಿಗ್ಗಾಂವಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಮಳೆ ಗಾಳಿಗೆ ಬಾಳೆ ಗಿಡಗಳು ನೆಲಕ್ಕುರುಳಿವೆ. ಆರು ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಧರೆಗುರುಳಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ.