ಶಿವಮೊಗ್ಗ/ಹಾವೇರಿ: ರಾಜ್ಯದಲ್ಲಿ ಆರಂಭವಾದ ಮುಂಗಾರು ಮಳೆಯಿಂದ ಹಲವೆಡೆ ಹಳ್ಳ ಕೊಳ್ಳಗಳಲ್ಲಿ ನೀರು ಭರ್ತಿಯಾಗಿದ್ದು, ಇವುಗಳಲ್ಲಿ ಮುಳುಗಿ ಒಂದೇ ದಿನ ಬಾಲಕರು ಸೇರಿ ಐವರು ಮೃತ ಪಟ್ಟಿರುವ ಘಟನೆಗಳು ವರದಿಯಾಗಿದೆ.
ಬೇಸಿಗೆ ರಜೆಯ ಮೋಜಿಗಾಗಿ ಕೆರೆಗೆ ಈಜಲು ಹೋಗಿದ್ದ ಎಂಟು ಬಾಲಕರಲ್ಲಿ ಮೂವರು ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕಿನಲ್ಲಿ ನಡೆದಿದ್ದಾರೆ. ಹೊಳೆ ನೀರಿಗೆ ಬಿದ್ದು ಕೌಶಿಕ್ 8 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ನಡೆದಿದೆ. ಮಳೆಯಿಂದಾಗಿ ಹೊಳೆಯಲ್ಲಿ ದಿಢೀರ್ ನೀರು ಹೆಚ್ಚಾದ ಕಾರಣ ಹೊಳೆ ಬಳಿ ಆಟವಾಡುತ್ತಿದ್ದ ಕೌಶಿಕ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಾಡಗುಪ್ಪಿ ಗ್ರಾಮದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಆರು ವರ್ಷದ ಬಾಲಕ ಸಾವು ಚಂದ್ರು ಪಡೆಪ್ಪ ಮೃತ ಬಾಲಕ. ತಾಯಿಯ ಜೊತೆ ಕೆಲಸಕ್ಕೆ ತೆರಳಿದ್ದ ವೇಳೆ ದುರ್ಘಟನೆ ನಡೆದಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶಿವಮೊಗ್ಗ ತಾಲೂಕು ತಮ್ಮಡಿಹಳ್ಳಿ ಗ್ರಾಮದ ಎಂಟು ಬಾಲಕರು ಜಂಗ್ಲಿ ಕೆರೆಯಲ್ಲಿ ಈಜಲು ತೆರಳಿದ್ದು, ಈ ವೇಳೆ ವಸಂತ್ (14), ಚಿರಂತ್ (14) ಹಾಗೂ ಅಜೇಯ (13) ಎಂಬ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಭಾನುವಾರವಾದ ಕಾರಣ ಸ್ನೇಹಿತರು ಕೆರೆಗೆ ಈಜಲು ಹೋಗಿದ್ದ ವೇಳೆ ಘಟನೆ ನಡೆದಿದೆ. ಗ್ರಾಮದ ಪಕ್ಕದ ಊರಿನಲ್ಲಿ ಮದುವೆ ಇದ್ದ ಕಾರಣ ಪೋಷಕರು ತೆರಳಿದ್ದರು. ಈ ವೇಳೆ ಸ್ನೇಹಿತರೊಂದಿಗೆ ಸೇರಿ ಈಜಲು ತೆರಳಿ ಸಾವನ್ನಪ್ಪಿದ್ದಾರೆ. ಘಟನೆ ಜಿಲ್ಲೆಯ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂಗಣೆ ಹಳ್ಳದಲ್ಲಿ ಮುಳುಗಿ ಅಂತೋನಿ ಡಿಸೋಜಾ ಎಂಬ ಯುವಕ ಮೃತ ಪಟ್ಟಿದ್ದಾನೆ. ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ ವೇಳೆ ಹಳ್ಳದಲ್ಲಿ ಬಿದ್ದು ಅಂತೋನಿ ಡಿಸೋಜಾ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮೃತ ಅಂಥೋನಿ ಡಿಸೋಜಾ ತಾಲೂಕಿನ ಮಿರ್ಜಾನ ಗ್ರಾಮ ನಿವಾಸಿಯಾಗಿದ್ದು, ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.