– ಮೂಡಿಗೆರೆಯಲ್ಲಿ ಪ್ರವಾಹದಂತಹ ಕಾಟ
ಬೆಂಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಮಂಗಳವಾರ ಸಂಜೆ ಸುಮಾರು ಒಂದು ಗಂಟೆ ಸುರಿದ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆ-ಗಾಳಿಗೆ ತಾಲೂಕು ಕಚೇರಿಯ ಕಾಂಪೌಂಡ್ ಕುಸಿದು ಬಿದ್ದಿದ್ದರೆ, ಅಂಗಡಿಯ ನಾಮಫಲಕದ ಬೋರ್ಡ್ ಗಳು ಕೂಡ ನೆಲಕ್ಕುರುಳಿವೆ.
ಧಾರಾಕಾರವಾಗಿ ಸುರಿದ ಮಳೆಯಿಂದ ರಸ್ತೆಯ ತುಂಬೆಲ್ಲಾ ಮಳೆ ನೀರು ಪ್ರವಾಹದಂತೆ ಹರಿದಿದೆ. ಪ್ರವಾಹದ ರೀತಿಯಲ್ಲಿ ಮಳೆ ನೀರನ್ನ ಕಂಡ ಮೂಡಿಗೆರೆ ಜನ ಆತಂಕಕ್ಕೀಡಾಗಿದ್ದಾರೆ. ಈಗ ಆಗಿರೋ ಮಳೆ ಅವಾಂತರಗಳಿಂದ ಜನ ಹೊರಬರೋದಕ್ಕೆ ಕನಿಷ್ಠ ಮೂರು ವರ್ಷಗಳು ಬೇಕು ಅಂತೆ. ಮತ್ತೆ ಈ ರೀತಿ ಮಳೆ ಸುರಿಯುವುದನ್ನು ಕಂಡ ಮಲೆನಾಡಿಗರು ಭವಿಷ್ಯ ನೆನಪಿಸಿಕೊಂಡು ವರುಣದೇವನಿಗೆ ಹಿಡಿಶಾಪ ಹಾಕುತ್ತಿದ್ದಾರೆ.
Advertisement
Advertisement
ಕರಾವಳಿ ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಕರ್ನಾಟಕ ಭಾಗದಲ್ಲು ಭಾರೀ ಮಳೆ ಆಗಿದೆ. ಸಿಡಿಲು ಹೊಡೆತಕ್ಕೆ ಸಿಲುಕಿ ಹಲವರು ಬಲಿಯಾಗಿದ್ದಾರೆ. ಮೈಸೂರಿನಲ್ಲಿ ಸುರಿದ ಧಾರಕಾರ ಮಳೆ ದಸರಾ ಕಾರ್ಯಕ್ರಮಗಳಿಗೆ ಅಡ್ಡಿ ಮಾಡಿತು. ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ತಳೇವಾಡ ಗ್ರಾಮದಲ್ಲಿ ಸಿಡಿಲಿಗೆ ಮರದಡಿ ಕುಳಿತಿದ್ದ ಬಾಲಕಿ ಹಾಗೂ ಬಾಲಕಿಯ ಚಿಕ್ಕಮ್ಮ ಬಲಿಯಾಗಿದ್ದಾರೆ. ದಸರಾ ರಜೆಗೆ ಚಿಕ್ಕಮ್ಮನ ಮನೆಗೆ ಬಂದಿದ್ದ ಬಾಲಕಿ ಸಾವಿತ್ರಿ ಸಿಲಿಡಿಗೆ ಸಿಲುಕಿ ಸಾವನ್ನಪ್ಪಿದ್ದಾಳೆ.
Advertisement
ಯಾದಗಿರಿ ಜಿಲ್ಲೆಯ ಗುರುಮಠಕಲ್ ಸಮೀಪದ ಹೊಲದಲ್ಲಿ ರೈತ ಚಂದ್ರಪ್ಪ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಮೈಲಾರಪುರದಲ್ಲಿ ರೈತರೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕೋಣನತಲೆ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಗಾಯಗೊಂಡಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿಯ ವಾಡಿ ಪಟ್ಟಣದಲ್ಲಿ ಧಾರಾಕಾರ ಮಳೆ ಆಗಿದ್ದು, ಹಲವು ಬಡಾವಣೆಗೆ ನೀರು ನುಗ್ಗಿ, ಮನೆಗಳು ಜಲಾವೃತವಾಗಿವೆ. ಜನ ನಿದ್ದೆಯಿಲ್ಲದ ರಾತ್ರಿಗಳನ್ನ ಕಳೆದಿದ್ದಾರೆ. ಉಡುಪಿಯಲ್ಲಿ ಭಾರೀ ಮಳೆ ಆಗಿದೆ.
Advertisement
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಲವೆಡೆ ಸಂಜೆ ಸುರಿದ ಧಾರಕಾರ ಮಳೆಗೆ, ಇಲ್ಲಿನ ಮಾರುಕಟ್ಟೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ, ತಾಲೂಕು ಪಂಚಾಯತಿ ವತಿಯಿಂದ ನಿರ್ಮಿಸಲಾಗಿದ್ದ ಮಾರುಕಟ್ಟೆಗೆ ನೀರು ನುಗ್ಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿನ ತರಕಾರಿಗಳೆಲ್ಲ ಮಳೆ ನೀರಲ್ಲಿ ನೆನೆದು ಹಾಳಾಗಿವೆ. ತಮ್ಮ ಅಂಗಡಿಗಳಿಗೆ ನುಗ್ಗಿದ ನೀರನ್ನ ಹೊರಹಾಕಲು ವ್ಯಾಪಾರಿಗಳು ಹರಸಾಹಸ ಪಟ್ಟರು. ಅವೈಜ್ಞಾನಿಕವಾಗಿ ಮಾರುಕಟ್ಟೆಯನ್ನ ನಿರ್ಮಿಸಿದ್ದಾರೆಂದು, ತಾಲೂಕು ಪಂಚಾಯತಿ ಅಧಿಕಾರಿಗಳ ವಿರುದ್ಧ ಇಲ್ಲಿನ ವರ್ತಕರು ಹಿಡಿಶಾಪ ಹಾಕಿದರು. ಮಾರುಕಟ್ಟೆಯ ತುಂಬಾ ಚರಂಡಿ ಹಾಗೂ ಮಳೆಯ ನೀರು ನುಗ್ಗಿ ಅವಾಂತರವನ್ನ ಸೃಷ್ಟಿ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv