ಬೆಂಗಳೂರು: ರಾಜ್ಯದಲ್ಲಿ ನಿರಂತರ ಮಳೆ ಜನರನ್ನು ಕಂಗಾಲು ಮಾಡಿದೆ. ಅದರಲ್ಲೂ ಅಕಾಲಿಕ ಮಳೆಯಿಂದಾಗಿ ರಾಜ್ಯದ ರೈತನ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಕೈಗೆ ಬಂದ ಫಸಲು ಇದೀಗ ಮಳೆ ಪಾಲಾಗಿದ್ದು ಅನ್ನದಾತನ ಸ್ಥಿತಿ ಕೇಳೋರೇ ಇಲ್ಲದಂತಾಗಿದೆ.
Advertisement
ಹೌದು. ಇಷ್ಟೊತ್ತಿಗಾಗಲೇ ಮಳೆ ನಿಂತೋಗಿ ಚಳಿ ಆರಂಭವಾಗಬೇಕಿತ್ತು, ಬಿಸಿಲು ಜೋರಾಗಬೇಕಿತ್ತು. ಆದರೆ ಮಳೆಯೇ ನಿಂತಿಲ್ಲ. ವಾಯುಭಾರ ಕುಸಿತದಿಂದಾಗಿ ರಾಜ್ಯದೆಲ್ಲೆಡೆ ಮಳೆ ಆಗ್ತಾನೇ ಇದೆ. ಇದರಿಂದಾಗಿ ಅನ್ನದಾತ ಈಗ ತಲೆಮೇಲೆ ಕೈ ಹೊತ್ತು ಕೂತಿದ್ದಾನೆ.
Advertisement
Advertisement
ರಾಯಚೂರಿನ ಮಾನ್ವಿ, ಸಿಂಧನೂರು, ದೇವದುರ್ಗದ ನೂರಾರು ಎಕರೆಯಲ್ಲಿ ಬೆಳೆದಿದ್ದ ಭತ್ತ ಹಾನಿಯಾಗಿದೆ. ಎಪಿಎಂಸಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಭತ್ತ ಹಾಳಾಗಿದೆ. ವಿವಿಧ ಜಿಲ್ಲೆಗಳು ಹಾಗೂ ತೆಲಂಗಾಣದಿಂದ ಬಂದಿರುವ ರೈತರ ಭತ್ತ ಮಾರಾಟಕ್ಕೂ ಮುನ್ನವೇ ನೀರುಪಾಲಾಗಿದೆ. ಭತ್ತದ ಜೊತೆಗೆ ಹತ್ತಿ, ಈರುಳ್ಳಿ ಸಹ ಮಳೆಗೆ ಒದ್ದೆಯಾಗಿದ್ದು ರೈತರಿಗೆ ನಷ್ಟವಾಗಿದೆ. ಭತ್ತದ ಬೆಲೆ ಏಕಾಏಕಿ ಕ್ವಿಂಟಾಲ್‍ಗೆ 1900 ರೂ ಇಂದ 1400 ರೂಪಾಯಿಗೆ ಇಳಿದಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
Advertisement
ಚಿಕ್ಕಮಗಳೂರಿನಲ್ಲಿ ಅನ್ನದಾತರ ಸ್ಥಿತಿ ಮಾತ್ರ ಯಾರಿಗೂ ಬೇಡವಾಗಿದೆ. ನಿರಂತರ ಮಳೆಗೆ ಕಾಫಿನಾಡು ತೊಯ್ದು ತೊಪ್ಪೆಯಾಗಿ ಹೋಗಿದೆ. ಅಡಿಕೆ-ಕಾಫಿಬೀಜ ಕುಯ್ಯೋಕಾಗ್ತಿಲ್ಲ. ಕೊಯ್ದರೂ ಒಣಗಿಸೋಕೆ ಜಾಗವಿಲ್ಲ. ಹಾಗಾಗಿ ಕಾಫಿಯೆಲ್ಲಾ ತೋಟದಲ್ಲೇ ಬಿದ್ದೋಗಿದೆ. ಅಲ್ಪಸ್ವಲ್ಪ ಸಿಕ್ಕ ಅಡಿಕೆ, ಕಾಫಿ ಬೀಜವನ್ನು ಒಲೆ, ಮನೆಯೊಳಗೆಲ್ಲಾ ಒಣಗಿಸುವಂತಾಗಿದೆ. ಅಡಿಕೆ ತೋಟದಲ್ಲಿ ನೀರು ನಿಂತಿದೆ. ಕಡೂರು-ಅಜ್ಜಂಪುರ ಭಾಗದಲ್ಲಿ ಈರುಳ್ಳಿ ಬೆಳೆ ನೆಲಕಚ್ಚಿದೆ. ಮಳೆಯಿಂದ ಕಾಳುಮೆಣಸು ಕೂಡ ಮಣ್ಣುಪಾಲಾಗಿದೆ. ದಾವಣಗೆರೆಯಲ್ಲಿ ಧಾರಾಕಾರ ಮಳೆಗೆ 500 ಎಕರೆಯಷ್ಟು ಬೆಳೆದಿದ್ದ ಭತ್ತ ನೆಲಸಮವಾಗಿದೆ. ಇದನ್ನೂ ಓದಿ: ಬೂಟ್ ಪಾಲಿಶ್ ಮಾಡಿ ಸರ್ಕಾರದ ಖಾತೆಗೆ ಹಣ ಜಮೆ ಮಾಡಲು ಮುಂದಾದ ಕರವೇ
ಹರಿಹರ ತಾಲೂಕಿನ ಸಾಲುಕಟ್ಟೆ, ಕಡ್ಲೆಗುಂದಿ, ದೇವರಬೆಳಕೆರೆ ಸೇರಿದಂತೆ ಹಲವು ಕಡೆಗಳಲ್ಲಿ ಕೊಯ್ಲಿಗೆ ಬಂದ ಭತ್ತದ ಬೆಳೆ ಈಗ ಮಣ್ಣುಪಾಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆಗೆ ಬೆಳೆ ನಾಶವಾಗಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಹೊನ್ನಾವರ, ಕುಮಟಾ, ಅಂಕೋಲಾ, ಜೋಯಿಡಾ ಭಾಗದಲ್ಲಿ ಮಳೆಯಿಂದ ರೈತರ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಫಸಲಿಗೆ ಬಂದ ಭತ್ತ, ಅಡಿಕೆ, ಕಾಳಮೆಣಸು ಸೇರಿದಂತೆ ಹಲವು ಬೆಳೆ ನೀರಿನಲ್ಲಿ ಕೊಚ್ಚಿಹೋಗಿದೆ. 795 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆದಿದ್ದ 85 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳೆಗಳು ನೆಲಕಚ್ಚಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದರಿಂದ ಇನ್ನೂ ನಾಲ್ಕು ದಿನಗಳ ಕಾಲ ಅಬ್ಬರದ ಮಳೆ ಸುರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರೈತರು ಬೆಳೆದ ಭತ್ತ ಕಟಾವಿಗೆ ಬಂದಿದ್ದರೆ ಅಡಿಕೆ ಹಣ್ಣಾಗಿದೆ. ಕಾಳುಮೆಣಸು, ಕಾಫಿಬೀಜ ಕೈಗೆ ಬರಬೇಕಿದೆ. ವರ್ಷವಿಡೀ ಬೆವರು ಸುರಿಸಿ ಹೊಲ-ತೋಟದಲ್ಲಿ ಬೆಳೆದ ಬೆಳೆಯನ್ನು ಅಕಾಲಿಕ ಮಳೆ ಆಹುತಿ ತೆಗೆದುಕೊಂಡಿದೆ. ರೈತರ ವರ್ಷದ ಕೂಳಿಗೆ ಕುತ್ತು ತಂದಿದೆ.