Connect with us

ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ- ಧರೆಗುರುಳಿದ ಮರಗಳು, ಮನೆಗಳಿಗೆ ನುಗ್ಗಿದ ನೀರು

ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ- ಧರೆಗುರುಳಿದ ಮರಗಳು, ಮನೆಗಳಿಗೆ ನುಗ್ಗಿದ ನೀರು

ಹುಬ್ಬಳ್ಳಿ: ಮಹಾನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಇಂದು ಸಂಜೆ ಭಾರೀ ಮಳೆಯಾಗಿದೆ. ಮಿಂಚು, ಗುಡುಗು, ಬಿರುಗಾಳಿ ಸಹಿತ ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ಸಾಕಷ್ಟು ಹಾನಿ ಸಂಭವಿಸಿದೆ. ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಮರಗಳು ಧರೆಗುರುಳಿವೆ.

ಬೇಸಿಗೆಯ ಧಗೆಗೆ ಸುರಿದ ಮಳೆ ತಂಪನ್ನೆರೆಯಿತು. ಆದರೆ ವೀಕೆಂಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗೆ ಆಗಮಿಸಿದ್ದ ಜನತೆ ಏಕಾಏಕಿ ಮಳೆಯಿಂದಾಗಿ ಪರದಾಡುವಂತಾಯಿತು. ಸಂಜೆ 6 ಗಂಟೆ ಸುಮಾರಿಗೆ ಆರಂಭವಾದ ಮಳೆ 7.30ರ ಬಳಿಕವೂ ಜಿಟಿಜಿಟಿಯಾಗಿತ್ತು. ಜೋರಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಹಲವೆಡೆ ಮರಗಳ ಟೊಂಗೆಗಳು ಉದುರಿ ರಸ್ತೆ ತುಂಬ ಹರಡಿದ್ದವು. ಹಲವೆಡೆ ವಿದ್ಯುತ್ ವ್ಯತ್ಯಯ ಸಹ ಉಂಟಾಗಿದೆ.

ಉರುಳಿದ ಮರ:
ದೇಶಪಾಂಡೆ ನಗರದಲ್ಲಿ ಹಾಗೂ ಗೋಕುಲ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಗ್ರಾಮಾಂತರ ಘಟಕದ ಬಳಿ ಬೃಹತ್ ಮರಗಳು ಉರುಳಿ ಟ್ರಾಫಿಕ್ ಜಾಮ್ ಉಂಟಾಯಿತು. ವಿದ್ಯುತ್ ತಂತಿ ತುಂಡಾಗಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಉರುಳಿದ ಮರಗಳನ್ನು ತೆರವು ಮಾಡಲು ಮಹಾನಗರ ಪಾಲಿಕೆ ಹಾಗೂ ಹೆಸ್ಕಾಂ ಸಿಬ್ಬಂದಿ ಹರಸಾಹಸಪಟ್ಟರು. ಮುಕ್ಕಾಲು ಗಂಟೆ ಕಾಲ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ದೇಶಪಾಂಡೆ ನಗರ, ಗಣೇಶ ನಗರ ಆನಂದನಗರ ರಸ್ತೆ, ಲೋಕಪ್ಪನ ಹಕ್ಕಲ, ಮಂಟೂರು ರಸ್ತೆ, ಎಸ್.ಎಂ.ಕೃಷ್ಣ ನಗರ, ಇಂದಿರಾ ನಗರ ಸೇರಿ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಚಾಟ್ನಿ ಕಾಂಪ್ಲೆಕ್ಸ್ ಸೇರಿ ನಗರದ ಹಲವು ವಾಣಿಜ್ಯ ಸಂಕೀರ್ಣಗಳು ಜಲಾವೃತವಾಗಿದ್ದವು.

ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿಯೂ ಮಳೆಯಾಗಿದ್ದು, ಕೆಲವೆಡೆ ನೀರು ನಿಂತು ಸಮಸ್ಯೆಯಾಗಿದೆ. ನವಲಗುಂದ ಹಾಗೂ ಕುಂದಗೋಳ ತಾಲೂಕಿನಲ್ಲಿಯೂ ಸಂಜೆ 4ಗಂಟೆಗೆ ಶುರುವಾದ ಮಳೆ 7ಗಂಟೆವರೆಗೂ ಜಿಟಿಜಿಟಿ ಮುಂದುವರಿದಿತ್ತು.

Advertisement
Advertisement
Advertisement