– ಅಪಾರ ಪ್ರಮಾಣದ ಮಾವು, ಸಪೋಟ ಬೆಳೆ ನಾಶ
ಗದಗ: ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಸಂಜೆ ವೇಳೆಗೆ ಗುಡುಗು, ಸಿಡಿಲು ಸಹಿತ ಧಾರಕಾರ ಆಲಿಕಲ್ಲು ಮಳೆಯಾಗಿದ್ದು, ಬೇಸಿಗೆಯ ಬಿಸಿಲಿನಲ್ಲಿ ಬೆಂಡಾದ ಭೂಮಿಗೆ ಮಳೆ ತಂಪೆರಿದಿದೆ.
ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರಳಿದ ಮಾಹಿತಿ ಲಭಿಸಿದೆ. ಇತ್ತ ನಿನ್ನೆ ರಾತ್ರಿಯೂ ಕೂಡ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ಅಕಾಲಿಕ ಮಳೆಗೆ ಬೇಸಿಗೆಯ ನಡುವೆಯೂ ನೀರುಣಿಸಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಮಾವು, ಸಪೋಟ ಬೆಳೆದ ರೈತರಿಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ.
ರಾತ್ರೋರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಸಾವಿರಾರು ಎಕರೆಯಲ್ಲಿ ಬೆಳೆದ ಮಾವಿನ ಗಿಡಗಳ ಫಸಲು ನೆಲಕ್ಕುರುಳಿದೆ. ಅಕಾಲಿಕ ಮಳೆಯ ಹೊಡೆತಕ್ಕೆ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.
ಗದಗ ತಾಲೂಕಿನ ಹುಲಕೋಟಿ, ಹೊಸಹಳ್ಳಿ, ಶಾಗೋಟಿ, ದುಂದೂರ ಗ್ರಾಮಗಳ ಭಾಗದಲ್ಲಿ ಮಳೆಯಾಗಿದ್ದು, ಈ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಮಾವು ಬೆಳೆದಿದ್ದಾರೆ. ಇಲ್ಲಿ ಬೆಳೆದ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು, ಸತತ ನಾಲ್ಕು ವರ್ಷಗಳ ಬರಕ್ಕೆ ಮಂಕಾಗಿದ್ದ ಮಾವು ಬೆಳೆಗಾರರ ಮುಖದಲ್ಲಿ ಈ ಬಾರಿ ಮಂದಹಾಸ ಮೂಡಿತ್ತು. ಹೀಗಾಗಿ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಸಿಡಿಲು ಬಡಿದಂತಾಗಿದೆ.
ಮಾವು ಮಾತ್ರವಲ್ಲ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಸಪೋಟ ಹಣ್ಣಿನ ಗಿಡಗಳು ಮುರಿದಿದ್ದು, ರೈತರಿಗೆ ತುಂಬಲಾರದ ನಷ್ಟ ಉಂಟಾಗಿದೆ. ಈ ಬಗ್ಗೆ ರೈತರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಕೂಡ ಯಾವೊಬ್ಬ ಅಧಿಕಾರಿಗಳು ತೋಟದ ಕಡೆ ಸುಳಿದಿಲ್ಲ ಎಂದು ರೈತರು ಆರೋಪ ಮಾಡಿದ್ದಾರೆ. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದು, ಸರ್ಕಾರದಿಂದ ಪರಿಹಾರಕ್ಕೆ ಆಗ್ರಹಿಸಿದ್ದಾರೆ.