ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ ಆಗುತ್ತಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಬೆಳಗ್ಗೆಯಿಂದ ಬಿಟ್ಟು ಬಿಡದೆ ಕೊಡಗಿನ ಭಾಗಮಂಡಲ, ತಲಕಾವೇರಿ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಪರಿಣಾಮ ಮತ್ತೆ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಮಳೆಯಿಂದ ನಾಪೋಕ್ಲು ಭಾಗಮಂಡಲ ಮತ್ತು ಮಡಿಕೇರಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ಮೇಲೆ 2 ಅಡಿ ನೀರು ಹರಿಯುತ್ತಿದೆ. ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ಯವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ಗುರುವಾರ ಶಾಲಾ ಕಾಲೇಜು, ಅಂಗನವಾಡಿಗೆ ರಜೆ ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಬೆಳಗ್ಗೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜನ ಚಳಿಯಿಂದ ತತ್ತರಿಸಿ ಹೋಗಿದ್ದಾರೆ. ಆಗೊಮ್ಮೆ ಈಗೊಮ್ಮೆ ಬಿರುಸಾಗಿ ಸುರಿಯುವ ಮಳೆ ಕರಾವಳಿ ಜನರಲ್ಲಿ ಹಳೆ ಕಾಲದ ಮಳೆಯ ವಾತಾವರಣವನ್ನು ನೆನಪಿಸಿದೆ. ಆಗಸ್ಟ್ ಮೊದಲ ವಾರದಲ್ಲಿ ಕರಾವಳಿ ಹಾಗೂ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗಿತ್ತು. ಆ ಬಳಿಕ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಇದೀಗ ಮತ್ತೆ ಮಳೆಯ ಅಬ್ಬರ ಶುರುವಾಗಿದ್ದು ಹಗಲು-ರಾತ್ರಿ ಸುರಿಯುತ್ತಿರುವ ಮಳೆ ಜನರನ್ನು ಹೈರಾಣಾಗುವಂತೆ ಮಾಡಿದೆ.
ಅಲ್ಲದೆ ಕರಾವಳಿಯಲ್ಲಿ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಪ್ರತಿ ತಾಲೂಕಿನ ನೋಡಲ್ ಅಧಿಕಾರಿಗಳು ಅಲರ್ಟ್ ಇರುವಂತೆ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸೂಚನೆ ನೀಡಲಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕೇರಳದ ವಯನಾಡಿನಲ್ಲಿ ಭಾರೀ ಮಳೆ ಆಗುತ್ತಿದ್ದು, ಕಬಿನಿ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಾಗಿದೆ. ಜಲಾಶಯದ ಒಳಹರಿವು 22,425 ಕ್ಯೂಸೆಕ್ ಗೆ ಹೆಚ್ಚಾದರೆ, ಜಲಾಶಯದ ಹೊರಹರಿವು 30,000 ಕ್ಯೂಸೆಕ್ ಗೆ ಹೆಚ್ಚಾಗಿದೆ.
ಇತ್ತ ಹಾವೇರಿಯಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದೆ, ಜಿಲ್ಲೆಯ ಬ್ಯಾಡಗಿ, ರಾಣೇಬೆನ್ನೂರು, ಹಿರೇಕೆರೂರು ಭಾಗದಲ್ಲಿ ಜಿಟಿಜಿಟಿ ಮಳೆ ಆಗುತ್ತಿದ್ದು, ಕೆಲ ಭಾಗದಲ್ಲಿ ಮೋಡ ಕವಿದ ವಾತಾವರಣ ಇದೆ. ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ.