ದಾವಣಗೆರೆ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಐತಿಹಾಸಿಕ ಕೋಟೆಯ ಒಂದು ಭಾಗ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಚನ್ನಗಿರಿ ತಾಲೂಕಿನ ವಡ್ನಾಳ್ ಗ್ರಾಮದ ಊರ ಮಧ್ಯಭಾಗದಲ್ಲಿರುವ ಐತಿಹಾಸಿಕ ವಡ್ನಾಳ್ ಕೋಟೆಯ ಗೋಡೆಯ ಒಂದು ಬದಿ ಮಳೆಗೆ ಕುಸಿದು ಬಿದ್ದ ಪರಿಣಾಮ ಕೋಟೆ ಇದೀಗ ಅಪಾಯದ ಅಂಚಿನಲ್ಲಿದೆ.
ಕೋಟೆ ಪಕ್ಕದಲ್ಲಿಯೇ ಮನೆಗಳಿದ್ದು ಯಾವುದೇ ತೊಂದರೆ ಸಂಭವಿಸಿಲ್ಲ. ಕೋಟೆ ಗೋಡೆ ಕುಸಿದು ಬಂಡೆಗಳು ರಸ್ತೆಯ ಮೇಲೆ ಬಿದ್ದಿದ್ದರಿಂದ ಶಾಲೆಗೆ ಹೋಗುವ ಮಕ್ಕಳು ಮತ್ತು ಜನರು ಬಂಡೆ ಮೇಲೆ ಹತ್ತಿ ಹೋಗುತ್ತಿದ್ದಾರೆ. ಇನ್ನು ಹೆಚ್ಚು ಮಳೆಯಾದರೆ ಕೋಟೆ ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ಅಕ್ಕ ಪಕ್ಕದ ಮನೆಯವರು ಆತಂಕಕ್ಕೊಳಗಾಗಿದ್ದಾರೆ.
ಹಾಲಿ ಶಾಸಕ ವಡ್ನಾಳ್ ರಾಜಣ್ಣ ನವರ ಸ್ವಗ್ರಾಮ ಇದಾಗಿದ್ದು, ಕೋಟೆ ಗೋಡೆ ಬಿದ್ದು ಐದಾರು ದಿನಗಳಾದರು ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.