ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಬಂಟ್ವಾಳ ತಾಲೂಕಿನಲ್ಲಿ ಹಲವೆಡೆ ನೇತ್ರಾವತಿ ನೆರೆ ನೀರು ನುಗ್ಗಿದ್ದು ನೂರಾರು ಮನೆಗಳು ಜಲಾವೃತಗೊಂಡಿವೆ.
ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಬಂಟ್ವಾಳ ಪೇಟೆಗೆ ನೀರು ನುಗ್ಗಿರುವುದರಿಂದ ಎನ್‍ಡಿಆರ್ ಎಫ್ ತಂಡ ರಕ್ಷಣಾ ಕಾರ್ಯಾಚರಣೆಗೆ ಇಳಿದಿದೆ. ಬಿ.ಸಿ ರೋಡ್ ಬಳಿಯ ಜಕ್ರಿಬೆಟ್ಟು, ಬಡ್ಡಕಟ್ಟೆ, ಭಂಡಾರಿಬೆಟ್ಟು ಎಂಬಲ್ಲಿ ಸಂತ್ರಸ್ತರನ್ನು ಎನ್‍ಡಿಆರ್ ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಾಂತರ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಿ.ಸಿ.ರೋಡ್ ಬಳಿಯ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಮನೆಗೆ ಜಲ ದಿಗ್ಬಂಧನವಾಗಿದ್ದು, ಅವರ ಕುಟುಂಬವನ್ನು ರಕ್ಷಣೆ ಮಾಡಿ ಬೋಟ್ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗಿದೆ. ಈ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಎನ್‍ಡಿಆರ್ ಎಫ್ ತಂಡ ನಿರಂತರವಾಗಿ ಶ್ರಮವಹಿಸುತ್ತಿದೆ.
Advertisement
Advertisement
ಬಂಟ್ವಾಳ ಸಮೀಪ ಇರುವ ಪ್ರದೇಶ ಬಹುತೇಕ ನೀರಿನಲ್ಲಿ ಮುಳುಗಡೆಯಾಗಿದ್ದು, ಈಗಾಗಲೇ ಹಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿ ನಿಂತಿರುವ ಲಾರಿಗಳು ನೀರಿನಲ್ಲಿ ಮುಳುಗುಡೆಯಾಗಿರುವ ದೃಶ್ಯಗಳು ಕಾಣಸಿಗುತ್ತದೆ. ಎಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಸಿಗುತ್ತೋ ಅಲ್ಲಿಗೆ ತೆರಳಿ ರಕ್ಷಣಾ ತಂಡಗಳು ಅವರ ನೆರವಿಗೆ ಬರುವ ಕಾರ್ಯವನ್ನು ಮಾಡುತ್ತಿವೆ. ಜಿಲ್ಲಾಡಳಿತ ಕೂಡ ನೇತ್ರಾವತಿ ನದಿ ದಡದಲ್ಲಿ ಇರುವ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚನೆ ನೀಡಿದೆ.