ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾನೆಯಿಂದ ಭಾರೀ ಮಳೆ ಸುರಿಯುತ್ತಿದೆ. ಉಡುಪಿಯಲ್ಲಿ ಕಳೆದ 24 ಗಂಟೆಯಲ್ಲಿ 60 ಮಿಲಿಮೀಟರ್ ಮಳೆ ದಾಖಲಾಗಿದ್ದು, ನಾಲ್ಕನೇ ದಿನವು ನಿರಂತರ ವರ್ಷಧಾರೆ ಆಗುತ್ತಿದೆ. ಜಿಲ್ಲೆಯ ಕುಂದಾಪುರ, ಕಾರ್ಕಳದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಾರ್ಮೋಡ ಮುಂದುವರಿದಿದ್ದು ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಮಂಗಳೂರು, ಕಾಸರಗೋಡು ತೀರ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಒಳಭಾಗದಲ್ಲಿ ಮಳೆ ಕಡಿಮೆಯಾಗಿದೆ. ಮಂಗಳೂರಿನ ಅತ್ತಾವರ, ಕೊಡಿಯಾಲ್ ಬೈಲಿನ ಎಂ.ಜಿ ರಸ್ತೆಯ ಬಳಿ ಮಳೆ ನೀರು ಹರಿಯಲಾಗದೆ ರಸ್ತೆಯಲ್ಲಿ ತುಂಬಿಕೊಂಡಿದೆ. ಮಧ್ಯಾಹ್ನ ಒಂದೂವರೆ ಗಂಟೆ ಕಾಲ ಸುರಿದ ಮಳೆಯಿಂದಾಗಿ ನಗರದ ಜನ ಹೈರಾಣಾಗಿದ್ದಾರೆ. ಯಾವಾಗಲೂ ಆಷಾಢ ಮಳೆ ಸಾಮಾನ್ಯವಾಗಿ ಸುರಿಯುತಿತ್ತು. ಆದರೆ ಈ ಬಾರಿ ಮಳೆಯೇ ಆಗದೆ ಜನ ಬಸವಳಿದಿದ್ದರು. ಇದೀಗ ಒಂದೇ ಸಮನೆ ಮಳೆಯಾಗಿದೆ.
Advertisement
Advertisement
ರಾಜ್ಯ ಹವಾಮಾನ ಇಲಾಖೆಯ ಅಧಿಕಾರಿಗಳು, ಜುಲೈ 22ರಿಂದ 25ರ ವರೆಗೆ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು. ಇದರಿಂದಾಗಿ ಜಿಲ್ಲಾಡಳಿತ ಕೂಡ ಮುಂಜಾಗ್ರತೆ ವಹಿಸಿಕೊಂಡಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಒಳಭಾಗದಲ್ಲಿ ಅಷ್ಟೇನೂ ಮಳೆಯಾಗಿಲ್ಲ. ಬೆಳ್ತಂಗಡಿ, ಸುಳ್ಯ, ಪುತ್ತೂರಿನಲ್ಲಿ ನಿರಂತರ ತುಂತುರು ಮಳೆಯಾಗುತ್ತಿದೆ.
Advertisement
Advertisement
ಇತ್ತ ಚಿಕ್ಕಮಗಳೂರಿನಲ್ಲಿ ಮಳೆ ಜೋರಾಗಿಯೂ ಸುರಿಯುತ್ತಿಲ್ಲ. ಅತ್ತ ಬಿಡುವು ಕೊಡ್ತಿಲ್ಲ. ಇದರಿಂದ ಮಲೆನಾಡಿಗರು ಮನೆಯಿಂದ ಹೊರಬರಲು ಆಗ್ತಿಲ್ಲ. ಮುಂಜಾನೆಯಿಂದಲೇ ಆರಂಭವಾದ ಮಳೆ ನಿಧಾನವಾಗಿ ಎಡೆಬಿಡದೆ ಸುರಿಯುತ್ತಿದ್ದು, ಜನ ಹೈರಾಣಾಗಿದ್ದಾರೆ.
ಚಿಕ್ಕಮಗಳೂರು ನಗರವೂ ಸೇರಿದಂತೆ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಕಳಸ, ಎನ್.ಆರ್ ಪುರದಲ್ಲಿ ಮಳೆರಾಯ ಆಟಕ್ಕೆ ಜನ ಬೆಸ್ತುಬಿದ್ದಿದ್ದಾರೆ. ಕುದುರೆಮುಖ, ಕೆರೆಕಟ್ಟೆ ಹಾಗೂ ಘಟ್ಟ ಪ್ರದೇಶದಲ್ಲಿ ಎರಡು ದಿನಗಳಿಂದಲೂ ಮಳೆ ಸುರಿಯುತ್ತಿದ್ದು ತುಂಗಾ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.
ಬೀದರ್ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ಹಿಂಗಾರು ಮಳೆಯಾದರು ಕೃಪೆ ತೋರಲಿ ಎಂದು ಇಂದು ಬೆಳಗ್ಗೆಯಿಂದ ಗ್ರಾಮ ದೇವತೆಯಾದ ಭವಾನಿ ಮಾತಾ ದೇವಸ್ಥಾನದಲ್ಲಿ ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳು ಸೇರಿದಂತೆ ಭಜನೆ, ಹಾಡು, ನೃತ್ಯ ಮಾಡುತ್ತಾ ಮಳೆಗಾಗಿ ಪ್ರಾಥನೆ ಸಲ್ಲಿಸಿದ್ದಾರೆ. ಬರೋಬ್ಬರಿ ಒಂದು ತಿಂಗಳಿನಿಂದ ಅಹೋರಾತ್ರಿ ಭಜನೆ, ಹಾಡು ಹಾಡುತ್ತಾ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂದು ಗ್ರಾಮಸ್ಥರು ಒಂದು ಕಡೆ ಸೇರಿ ನೃತ್ಯ ಮಾಡುವ ಮೂಲಕ ಸ್ಥಳೀಯರ ಗಮನ ಸೆಳೆಯಿತು.