ಬೆಂಗಳೂರು: ರಾಜ್ಯಕ್ಕೆ ಅಧಿಕೃತವಾಗಿ ಇನ್ನೂ ಮುಂಗಾರು ಪ್ರವೇಶ ಮಾಡದಿದ್ದರೂ ಕರಾವಳಿಯಲ್ಲಿ ಮಳೆ ಅಬ್ಬರಿಸುತ್ತಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ನೀರಿಲ್ಲದೆ ಬತ್ತಿಹೋಗಿದ್ದ ನೇತ್ರಾವತಿ ನದಿಯಲ್ಲಿ ಮತ್ತೆ ನೀರು ತುಂಬಿದೆ.
ರಾಜ್ಯದ ಕರಾವಳಿಯಲ್ಲಿ ಸದ್ಯಕ್ಕೆ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಮಡಿಕೇರಿ ಭಾಗದಲ್ಲಿ ನೀರಿನ ಮೂಲಗಳು ಭರ್ತಿಯಾಗಿವೆ. ನೇತ್ರಾವತಿ ನದಿ ಜೀವ ಪಡೆದಿದ್ದು, ಧರ್ಮಸ್ಥಳದ ಸ್ನಾನಘಟ್ಟಕ್ಕೆ ನೀರು ಬಂದಿದೆ.
ಮಡಿಕೇರಿಯಲ್ಲೂ ಮಳೆ ಆಗುತ್ತಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಚಾರ್ಮಾಡಿ ಘಾಟ್‍ನಲ್ಲಿ ಮತ್ತೆ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಪ್ರಬಲ ಶಕ್ತಿಯೊಂದಿಗೆ ಗುಜರಾತ್‍ಗೆ ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಿದ ವಾಯು ಸೈಕ್ಲೋನ್ ಕೊನೆಗೂ ಯಾವುದೇ ಸದ್ದಿಲ್ಲದೇ ಗುಜರಾತ್‍ನಿಂದ ಒಮನ್‍ನತ್ತ ಸಾಗಿದೆ.
ಆದರೂ, ಗುಜರಾತ್‍ನಲ್ಲಿ ಮುಂದಿನ 24 ಗಂಟೆ ಅಲರ್ಟ್ ಘೋಷಿಸಲಾಗಿದೆ. ಸೌರಾಷ್ಟ್ರ, ಕಚ್‍ನ ಕಡಲ ತೀರಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಗೋವಾದಲ್ಲಿ ಅಚಾನಕ್ಕಾಗಿ ಬಂಡೆಯಿಂದ ಜಾರಿ ಸಮುದ್ರದಲ್ಲಿ ಪಾಲಾಗುತ್ತಿದ್ದ ಸೇನಾ ಸಿಬ್ಬಂದಿಯನ್ನು ಕೋಸ್ಟಲ್ ಗಾರ್ಡ್ ಹೆಲಿಕಾಪ್ಟರ್‍ನಿಂದ ರಕ್ಷಣೆ ಮಾಡಲಾಗಿದೆ.