ಚಿಕ್ಕಮಗಳೂರು/ಉಡುಪಿ/ದಕ್ಷಿಣಕನ್ನಡ: ಒಂದು ವಾರ ವಿರಾಮ ನೀಡಿದ ಬಳಿಕ ಮಳೆರಾಯ ಇಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರ್ಭಟ ಮುಂದುವರಿಸಿದ್ದಾನೆ.
ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದ ಹಿಂದೆ ಆದ ಅವಾಂತರಗಳಿಂದ ಜನಸಾಮಾನ್ಯರು ಹೊರಬರುವಷ್ಟರಲ್ಲಿ ಮತ್ತೆ ಮಳೆರಾಯನ ಆಗಮನ ಜೋರಾಗಿದೆ. ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಕಳಸ ಭಾಗದಲ್ಲಿ ಬೆಳಗ್ಗಿನಿಂದಲೂ ಕಪ್ಪನೆಯ ಕಾರ್ಮೋಡ ಕವಿದು ಮಳೆ ಸುರಿಯುತ್ತಿದೆ. ಇದರ ನಡುವೆಯೂ ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿಕೊಂಡು, ಬಿತ್ತನೆ ಕೆಲಸಕ್ಕೆ ಮುಂದಾಗಿದ್ದಾರೆ.
ಚಾರ್ಮಾಡಿ ಘಾಟ್‍ನಲ್ಲೂ ಕೂಡ ಮಳೆ ಬೀಳುತ್ತಿದ್ದು, ದಟ್ಟವಾದ ಮಂಜು ಕವಿದಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ವಾಹನ ಚಲಾಯಿಸಲು ಪರದಾಡುತ್ತಿದ್ದಾರೆ. ಹೆಚ್ಚಿನ ಮಂಜು ಕವಿದ ಕಾರಣದಿಂದ ಚಾರ್ಮಾಡಿ ಘಾಟ್‍ನಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ದಕ್ಷಿಣಕನ್ನಡದಲ್ಲಿ ಬೆಳಗ್ಗಿನಿಂದಲೂ ವರುಣ ತನ್ನ ಆರ್ಭಟ ಮುಂದುರಿಸಿದ್ದಾನೆ. ಹಲವು ರಸ್ತೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿರುವುದರಿಂದ ಮತ್ತೆ ನೆರೆಯ ಆತಂಕ ಸೃಷ್ಟಿಯಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ, ಬೈಂದೂರಲ್ಲೂ ಬಿರುಸಿನ ಮಳೆ ಬೀಳುತ್ತಿದೆ. ಭಾರೀ ಮೋಡ ಮುಸುಕಿದ ವಾತಾವರಣವಿದ್ದು, ದಿನವಿಡೀ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಮಳೆ ಜೊತೆ ಗಾಳಿ ಬೀಸುತ್ತಿದೆ. ನಾಡದೋಣಿ ಮೀನುಗಾರರಿಗೆ ಜಿಲ್ಲಾಡಳಿತ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಜಿಲ್ಲೆಯ ನದಿ, ಕೆರೆ ತೊರೆಗಳು ತುಂಬಿ ಹರಿಯುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅರಬ್ಬೀ ಸಮುದ್ರದಲ್ಲಿ ಗಂಟೆಗೆ ಸುಮಾರು 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಸಮುದ್ರ ತೀರದ ಜನ ಎಚ್ಚರಿಕೆಯಿಂದ ಇರುವಂತೆ ಮುನ್ಸೂಚನೆ ನೀಡಲಾಗಿದೆ.
ಸೋಮವಾರ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿಯವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದರು. ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಹೆಚ್ಚು ಮಳೆ ಬೀಳಲಿದೆ. ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಅವರು ತಿಳಿಸಿದ್ದರು.