ಬೆಂಗಳೂರು: ಭಾನುವಾರ ರಾತ್ರಿ ಸುರಿದ ಭಾರೀ ಮಳೆ ರಾಜ್ಯ ರಾಜಧಾನಿ ಬೆಂಗಳೂರು ನಲುಗಿದೆ. ಹೆಚ್‍ಬಿಆರ್ ಲೇಔಟ್, ಇಂದಿರಾನಗರ ಸೇರಿದಂತೆ ಅನೇಕ ಏರಿಯಾಗಳು ಜಲಾವೃತವಾಗಿ ಭಾರೀ ಅನಾಹುತಗಳಾಗಿವೆ.
ನಿರಂತರ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಯಂತೆ ಆಗಿದೆ. ಬಹುತೇಕ ರಸ್ತೆಯಲ್ಲಿ ಸಂಚಾರ ಮಾಡಿದರೂ ರಸ್ತೆಯ ಬದಲು ನೀರನ್ನೆ ಕಾಣುವ ಪರಿಸ್ಥಿತಿ ಉಂಟಾಗಿದೆ. ಇನ್ನೂ ಅಂಡರ್ ಪಾಸ್ ಪರಿಸ್ಥಿತಿ ಹೇಳೋದೇ ಬೇಕಾಗಿಲ್ಲ. ಅದಕ್ಕೆ ಒಂದು ಉದಾಹರಣೆ ಬಾಣಸವಾಡಿ ಔಟರ್ ರಿಂಗ್ ರೋಡ್‍ನ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿದೆ.
Advertisement
Advertisement
ಇನ್ನೂ ಮಾರತಹಳ್ಳಿ ವರ್ತೂರು ರಸ್ತೆಯಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ. ಒಂದು ಕಡೆ ಕೆಟ್ಟು ನಿಂತ ವಾಹನಗಳು, ಇನ್ನೂ ನೀರಿನಲ್ಲೇ ಹೋಗೋದಕ್ಕೆ ಹೋಗಿ ಬಿದ್ದ ಬೈಕ್ ಸವಾರ, ಹೇಗೋ ಹೋಗೋಣ ಎಂದು ಸಾಹಸಕ್ಕೆ ಹೋಗಿ ಕೆಟ್ಟು ನಿಂತ ಆಟೋವನ್ನು ತಳ್ಳಿಕೊಂಡು ಹೋಗುತ್ತಿರುವ ಆಟೋ ಚಾಲಕರು, ನೀರಿನಲ್ಲಿ ಹೋಗುವುದೇ ಬೇಡ ಎಂದು ಕಾಯುತ್ತ ನಿಂತಿರೋ ವಾಹನಗಳ ದೃಶ್ಯಗಳು ಕಂಡುಬಂದವು.
Advertisement
Advertisement
ಇನ್ನೂ ಮಳೆಯ ಪರಿಣಾಮ ಹೆಚ್‍ಬಿಆರ್ ಲೇಔಟ್‍ನ ಮೊದಲ ಹಂತದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರು ರಾಜಕಾಲುವೆಗೆ ಹರಿದು ಹೋಗುವ ಕ್ರಮಕ್ಕೆ ಮುಂದಾದರು.
ಇನ್ನೂ ಬೆಂಗಳೂರು ಏರ್‌ಪೋರ್ಟ್‍ನಲ್ಲೂ ಭಾರೀ ಮಳೆಗೆ ಸಂಪೂರ್ಣ ಜಲಾವೃತವಾಗಿದ್ದು, ಜನರು ಸಂಚಾರಕ್ಕೆ ಪರದಾಟ ನಡೆಸಿದರು. ಮಹಾ ಮಳೆಗೆ ಇಂದಿರಾನಗರ ಮುಳುಗಡೆಯಾಗಿದ್ದು, ರಸ್ತೆಯಲ್ಲಿ ಮೂರು ಅಡಿಯಷ್ಟು ನೀರು ನಿಂತು ಕೆರೆಯಂತಾಗಿದೆ. 100ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ರಾತ್ರಿ ಇಡೀ ಜನ ಜಾಗರಣೆ ಮಾಡಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಹೆದ್ದಾರಿಗೆ ನುಗ್ಗಿದ ನೀರು – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್
ಡಾಲರ್ಸ್ ಕಾಲೋನಿಯಲ್ಲಿರುವ ಲಹರಿ ಮ್ಯೂಸಿಕ್ ಮಾಲೀಕ ಲಹರಿ ವೇಲು ಅವರ ಮನೆಗೂ ಮಳೆ ನೀರು ನುಗ್ಗಿದೆ. ಪಾರ್ಕಿಂಗ್ ಜಾಗಕ್ಕೆ ನಾಲ್ಕೈದು ಅಡಿ ನೀರು ತುಂಬಿದ್ದು, ಮಳೆ ಬಂದಾಗ ಇದೇ ರೀತಿ ಸಮಸ್ಯೆ ಆಗುತ್ತದೆ. ಇಳಿಜಾರಿನಲ್ಲಿ ಇರುವುದರಿಂದ ನೀರು ತುಂಬಿಕೊಳ್ಳುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಳ್ಳಂದೂರು ಹೊರವರ್ತುಲ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದು, ಸುಮಾರು 5 ಕಿಮೀವರೆಗೂ ವಾಹನಗಳು ಸಾಲು ಗಟ್ಟಿ ನಿಂತಿದೆ. ರಾತ್ರಿ ಸುರಿದ ಮಳೆಗೆ ಬೆಂಗಳೂರು ಬೆಚ್ಚಿಬಿದ್ದಿದ್ದು, ಹಲವು ಏರಿಯಾಗಳು ಜಲಾವೃತವಾಗಿ, ರಾತ್ರಿಯಿಡೀ ಜನ ಜಾಗರಣೆ ಮಾಡಿದ್ದಾರೆ. ಯಮಲೂರು ರಸ್ತೆ ಜಲಾವೃತವಾಗಿದ್ದರಿಂದ ಟ್ರ್ಯಾಕ್ಟರ್ ಮೂಲಕ ಜನರನ್ನು ದಡಕ್ಕೆ ಸಾಗಿಸಲಾಗುತ್ತಿದೆ. ಇದನ್ನೂ ಓದಿ: ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು